

ಚಳ್ಳಕೆರೆ: ನಗರಸಭೆಗೆ ಚುನಾವಣೆ ನಡೆದು ಎರಡು ವರ್ಷದ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನ.3ರಂದು ಮಹೂರ್ತ ನಿಗದಿಯಾಗಿದೆ.
ಬೆಳಗ್ಗೆ 10ರಿಂದ 11ರ ವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ 1ಕ್ಕೆ ನಾಮಪತ್ರ ಪರಿಶೀಲನೆ, ಮಧ್ಯಾಹ್ನ 1ರಿಂದ 1.10ರ ವರೆಗೆ ನಾಮಪತ್ರ ಹಿಂಪಡೆಯುವ ಅವಕಾಶ, ಒಂದು ವೇಳೆ ಅವಕಾಶವಿದ್ದಲ್ಲಿ ಮಧ್ಯಾಹ್ನ 1.15ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಚುನಾವಣಾಧಿಕಾರಿ, ಎಸಿ ಪ್ರಸನ್ನ ತಿಳಿಸಿದ್ದಾರೆ.
31 ಸಂಖ್ಯಾಬಲದಲ್ಲಿ 16 ಕಾಂಗ್ರೆಸ್, 10 ಜೆಡಿಎಸ್, 4 ಬಿಜೆಪಿ, ಒಬ್ಬರು ಪಕ್ಷೇತರ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಗಾದಿಗೇರಲು 17 ಮ್ಯಾಜಿಕ್ ನಂಬರ್ ಆಗಿದೆ. ಸ್ಪಷ್ಟ ಬಹುಮತ ಇರುವ ಕಾಂಗ್ರೆಸ್ ಅಧಿಕಾರ ಗದ್ದುಗೆ ನಮ್ಮದೆ ಎಂದು ದೃಢವಾಗಿದೆ. ಆದರೆ, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿರುವ ಸಿ.ಬಿ.ಜಯಲಕ್ಷ್ಮಿ, ಸುಮಕ್ಕ ಅಂಜಿನಪ್ಪ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಇಬ್ಬರಲ್ಲಿ ಮೊದಲ ಅವಧಿಗೆ ಅಧ್ಯಕ್ಷಗಿರಿ ಯಾರಿಗೆ ಅದೃಷ್ಟ ಒಲಿಯಲಿದೆ ಎನ್ನುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈಚೆಗೆ ಮೀಸಲಾತಿ ಗೊಂದಲ ನಿವಾರಣೆಯಾಗಿ ಕೋರ್ಟ್‌ನಿಂದ ಚುನಾವಣೆಗೆ ಅಸ್ತು ಎಂದಾಗ ಜೆಡಿಎಸ್ ಮತ್ತು ಬಿಜೆಪಿ ಎಲೆಮರೆಯಲ್ಲಿ ರಾಜಕೀಯ ಚಟುವಟಿಕೆ ನಡೆಸಿಕೊಂಡು ಅಧಿಕಾರ ಸ್ಥಾನವನ್ನು ಕಾಂಗ್ರೆಸ್ಸಿಗೆ ಕೈ ತಪ್ಪಿಸಬೇಕು ಎನ್ನುವ ತಂತ್ರ ಮಾಡಿದ್ದರೂ, ಕಾಂಗ್ರೆಸ್ ಸದಸ್ಯರ ಒಗ್ಗಟ್ಟು ಪರಿಣಾಮ ಚುನಾವಣಾ ಕಣದಿಂದ ಹಿಂದೆ ಸರಿದಿವೆ ಎನ್ನಲಾಗಿದೆ.