

ಚಳ್ಳಕೆರೆ: ತಾಲೂಕು ಕಚೇರಿ ಸಮೀಪ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮಿನಿ ವಿಧಾನಸೌಧ ಕೆಲವೇ ದಿನಗಳಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿಗೆ ಸೋಮವಾರ ಭೇಟಿ ನೀಡಿದ್ದ ಅವರು, ಹಳೇ ತಾಲೂಕು ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದ ಬಳಿಕ ಕಚೇರಿಯ ಕೆಲ ಕೊಠಡಿಗಳನ್ನು 85 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಇಲಾಖೆಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ತಾಲೂಕು ಕಚೇರಿಯ ಪ್ರತಿ ಶಾಖೆಗಳಿಗೂ ಭೇಟಿ ನೀಡಿದ ಶಾಸಕರು, ದಾಖಲಾತಿ ಸಂಗ್ರಹ ಕೊಠಡಿ ವೀಕ್ಷಣೆ ಮಾಡಿದರು. 50-60 ವರ್ಷಗಳ ಹಳೇ ದಾಖಲಾತಿಗಳ ಪೋಷಣೆಗೆ ಬಟ್ಟೆ ಖರೀದಿಸುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಗೆ ಸೂಚಿಸಿದರು.
ಕಟ್ಟಡ ನವೀಕರಣ ಕಾಮಗಾರಿ ವೇಳೆ ಖಜಾನೆ ಶಾಖೆ, ಚುನಾವಣೆ ಶಾಖೆ, ಪಡಸಾಲೆ ಕೊಠಡಿಗಳಲ್ಲಿ ಅಗತ್ಯ ಸೌಕರ್ಯಗಳ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.
ನಗರಸಭೆ ಸದಸ್ಯರಾದ ಕೆ.ವೀರಭದ್ರಯ್ಯ, ಬಿ.ಟಿ.ರಮೇಶ್‌ಗೌಡ, ಟಿ.ಮಂಜುನಾಥ, ತಾಪಂ ಸದಸ್ಯ ಎಚ್.ಆಂಜನೇಯ ಮತ್ತಿತರರಿದ್ದರು.