

ಚಳ್ಳಕೆರೆ: ಮಹಾತ್ಮರ ಜಯಂತ್ಯುತ್ಸವಗಳು ತಳ ಸಮುದಾಯಗಳ ಪ್ರಗತಿಗೆ ಸಹಕಾರಿಯಾಗುವಂತಾದರೆ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸವಿತಾ ಸಮುದಾಯದ ಅಭಿವೃದ್ಧಿಗಾಗಿ ವಿಠಲ ನಗರದಲ್ಲಿ ಈಗಾಗಲೇ 10 ಲಕ್ಷ ರೂ. ವೆಚ್ಚದ ಸವಿತಾ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಮಾಜದವರಿಗೆ ನಿವೇಶನ ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೂ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು.
ಉಪನ್ಯಾಸ ನೀಡಿದ ಸಂಪಿಗೆ ತಿಪ್ಪೇಸ್ವಾಮಿ, ಬಿಸಿಎಂ 2ಎ ವರ್ಗದಲ್ಲಿ ಬಲಾಢ್ಯ ಕೋಮುಗಳು ಇರುವ ಕಾರಣ ಸವಿತಾ ಸಮಾಜವನ್ನು ಬೇರ್ಪಡಿಸಲು ಕ್ರಮ ಕೈಗೊಳ್ಳಬೇಕು. ವಿಶೇಷ ಮೀಸಲಾತಿ ಕಲ್ಪಿಸಿ ಪರಿಶಿಷ್ಟ ಜಾತಿಗೆ ಸೇರಿಸುವ ಕೆಲಸ ಆಗಬೇಕು. ವಸತಿ ಇನ್ನಿತರ ಅಗತ್ಯ ಸೌಲಭ್ಯ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ತಾಪಂ ಸದಸ್ಯ ಜಿ.ವೀರೇಶ್, ನಗರಸಭೆ ಸದಸ್ಯರಾದ ಟಿ.ಮಲ್ಲಿಕಾರ್ಜುನ, ಬಿ.ಟಿ.ರಮೇಶಗೌಡ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.