

ಚಳ್ಳಕೆರೆ: ಧರ್ಮ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ನೆಮ್ಮದಿ ದೊರೆಯುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರ ಹೊರವಲಯದ ಶ್ರೀವೆಂಕಟ ಸಾಯಿ ಸೇವಾ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸಾಯಿಬಾಬಾ ಮಂದಿರದ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮೂರು ವರ್ಷದ ಹಿಂದೆ ಆರಂಭಗೊಂಡ ಸಾಯಿ ಮಂದಿರ, ಸಾವಿರಾರು ಭಕ್ತರ ನೆಲೆಯಾಗಿ ಬೆಳೆದಿದೆ. ಇದರ ನಿರ್ಮಾಣಕ್ಕೆ ಸಹಕಾರ ನೀಡಿದ್ದು ಮನಸ್ಸಿಗೆ ನೆಮ್ಮದಿ ತಂದಿದೆ ಎಂದರು.
ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಆಸೆಗಳಿರುತ್ತವೆ. ಇವುಗಳನ್ನು ಈಡೇರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಮುಖ್ಯವಾಗಿ ತಾಳ್ಮೆ ಇರಬೇಕು. ಗುರಿಯೆಡೆಗೆ ಸತತ ಪ್ರಯತ್ನ ಇದ್ದಾಗ ಮಾತ್ರ ಯಶಸ್ಸು ದೊರಕುತ್ತದೆ ಎಂದ ಅವರು, ಮನಸಿನ ನಿಯಂತ್ರಣಕ್ಕೆ ಭಕ್ತಿ ಮಾರ್ಗ ಸೂಕ್ತವಾಗಿದೆ ಎಂದರು.
ಹೊಸಪೇಟೆ ರಾಮಕೃಷ್ಣ ಗೀತಾಶ್ರಮದ ಸ್ವಾಮಿ ಸುಮೇದಾನಂದಾಜಿ ಮಹರಾಜ್, ಶಿರಡಿ ಸಾಯಿ ಮಂದಿರದ ಅರ್ಚಕ ಅಮಿತ್ ದೇಶಮುಖ್ ಪಂಡಿತ್‌ಜಿ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಾತೃಶ್ರೀ ಮಂಜುನಾಥ, ಮುಖಂಡರಾದ ಸೋಮಶೇಖರ್ ಮಂಡಿಮಠ್, ಬಾಳೆಕಾಯಿ ರಾಮದಾಸ್, ಟಿ.ರವಿಕುಮಾರ್, ಬಿ.ವಿ.ಚಿದಾನಂದ ಮೂರ್ತಿ, ಹೂವಿನ ಜಗದೀಶ್ ಮತ್ತಿತರರಿದ್ದರು.