

ಚಳ್ಳಕೆರೆ: ಲಾಕ್‌ಡೌನ್ ಜಾರಿಯಿಂದ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವುದು ಖಚಿತ. ಶಿಕ್ಷಕರು ಇಂದಿನಿಂದಲೇ ವಿದ್ಯಾರ್ಥಿಗಳ ಸಂಪರ್ಕ ಸಾಧಿಸಿ ಪರೀಕ್ಷಾ ಸಿದ್ಧತೆ ಕೈಗೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಪ್ರೌಢಶಾಲಾ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿಯ ಫಲಿತಾಂಶ ಉತ್ತಮವಾಗಿ ಬರಲು ಶ್ರಮಿಸಬೇಕು. ಮುಂದೂಡಿದ ಕಾಲಾವಕಾಶವನ್ನು ಹೆಚ್ಚಿನ ಅಭ್ಯಾಸಕ್ಕೆ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡಿರುತ್ತಾರೆ. ಈ ಸಮಯದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಸಂಪರ್ಕ ಸಾಧಿಸಿ ಅವರಲ್ಲಿ ಧೈರ್ಯ ತುಂಬಬೇಕು. ಲಾಕ್‌ಡೌನ್ ಸಮಯವನ್ನು ಅಭ್ಯಾಸಕ್ಕೆ ವಿನಿಯೋಗಿಸಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ತಿಳಿಸಿದರು.
ಬಿಇಒ ಸಿ.ಎಸ್.ವೆಂಕಟೇಶ್ ಮಾತನಾಡಿ, ಪರೀಕ್ಷಾ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಸರ್ಕಾರದ ‘ಮಕ್ಕಳ ವಾಣಿ’ ಎಂಬ ಯುಟ್ಯೂಬ್ ಚಾನಲ್‌ನಲ್ಲಿ ಪರೀಕ್ಷಾ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ತಾಲೂಕಿನಲ್ಲಿ 4433 ವಿದ್ಯಾರ್ಥಿಗಳಲ್ಲಿ 2744 ವಿದ್ಯಾರ್ಥಿಗಳು ಯುಟ್ಯೂಬ್ ಬಳಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ತಾಲೂಕಿನ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.