ವಿಶೇಷ ಪ್ಯಾಕೇಜ್‌ನಡಿ ನೆರವಿಗೆ ಆಗ್ರಹ

CLK MANAVI 13
Published on

ಚಳ್ಳಕೆರೆ: ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಸರ್ಕಾರ ಜಾರಿ ಮಾಡಿರುವ ವಿಶೇಷ ಪ್ಯಾಕೇಜ್‌ನಡಿ ನೆರವು ನೀಡಬೇಕೆಂದು ಆಗ್ರಹಿಸಿ ಬುಧವಾರ ಹಾಲು ಮತ ಮಹಾಸಭಾ ಕಾರ್ಯಕರ್ತರು ಶಿರಸ್ತೇದಾರ್ ಮಂಜುನಾಥ್‌ಗೆ ಮನವಿ ಸಲ್ಲಿಸಿದರು.

ಕುರುಬ ಸಮುದಾಯ ಕುರಿ, ಮೇಕೆ ಸಾಕಣೆ, ಕುರಿ ಉಣ್ಣೆ ಕಂಬಳಿ ತಯಾರಿಕೆಯಿಂದಲೇ ಜೀವನ ನಡೆಸುತ್ತಿದೆ. ಪ್ರಸ್ತುತ ಲಾಕ್‌ಡೌನ್‌ನಿಂದ ಮಾರುಕಟ್ಟೆ ಇಲ್ಲದೆ ಸಂಕಷ್ಟ ಎದುರಾಗಿದೆ.

ಹೀಗಾಗಿ ಈ ಸಮಾಜದ ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕುರಿ ಮೇಯಿಸಲು ಹೋದಾಗ ಅಡವಿಯಲ್ಲಿ ಸಿಡಿಲು ಇತ್ಯಾದಿ ಪ್ರಕೃತಿ ವಿಕೋಪಕ್ಕೆ ಸಾವಿಗೀಡಾಗುವ ಕುರಿಗಾಹಿಗಳಿಗೆ ಸೂಕ್ತ ಪರಿಹಾರ ನೀಡುವಂತಾಗಬೇಕು.

ಅಪಘಾತ, ಕಾಯಿಲೆಯಿಂದ ಸಾವಿಗೀಡಾಗುವ ಕುರಿ, ಜಾನುವಾರುಗಳಿಗೆ ಕಳೆದ ಸರ್ಕಾರ ಜಾರಿ ಮಾಡಿರುವ ಅನುಗ್ರಹ ಯೋಜನೆ ಸಹಾಯ ಧನವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ಸದಸ್ಯ ಎಂ.ಜೆ.ರಾಘವೇಂದ್ರ, ಮಹಾಸಭಾದ ಉಪಾಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಸಿ.ಎ.ಬಸವರಾಜ, ಮಂಜುನಾಥಪ್ಪ, ಅಜ್ಜಣ್ಣ, ಪಾತಲಿಂಗಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net