ಚಳ್ಳಕೆರೆ ತಾಲೂಕಲ್ಲಿ ಪಡಿತರ ಸಮಸ್ಯೆ

CLK PADITHARA 16
Published on

ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಯಾದಲಗಟ್ಟೆ, ನನ್ನಿವಾಳ, ಬೊಂಬೆರಹಳ್ಳಿ, ಕುರುಡಿಹಳ್ಳಿ ಮತ್ತಿತರ ಗ್ರಾಮಗಳ ಬಡ ಜನರಿಗೆ ಇತ್ತ ಉದ್ಯೋಗವೂ ಇಲ್ಲ. ಇನ್ನೊಂದೆಡೆ ಪಡಿತರ ಅಕ್ಕಿಯೂ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ 260ಕ್ಕೂ ಅಧಿಕ ಹಳ್ಳಿಗಳಿಗೆ ಕೇವಲ 117 ನ್ಯಾಯಬೆಲೆ ಅಂಗಡಿ ಮೂಲಕ ಸಕಾಲಕ್ಕೆ ಪಡಿತರ ವಿತರಿಸುವುದು ಆಹಾರ ಇಲಾಖೆಗೆ ಸವಾಲಿನ ಕೆಲಸವಾಗಿದೆ.

ಪ್ರತಿ ಅಂಗಡಿಗೆ ಐದಾರು ಹಳ್ಳಿಗಳ ಪಡಿತರದಾರರಿಗೆ ಪಡಿತರ ನೀಡುವ ಜವಾಬ್ದಾರಿ ವಹಿಸಲಾಗಿದೆ. ಒಂದೆರಡು ಹಳ್ಳಿಗೆ ವಿತರಣೆ ಮಾಡಿರುವ ಅಂಗಡಿ ಮಾಲೀಕರು ದಾಸ್ತಾನು ಖಾಲಿ ಮಾಡಿಕೊಂಡಿದ್ದಾರೆ. ಪೂರೈಕೆಯಾದ ನಂತರದಲ್ಲಿ ವಿತರಿಸುವುದಾಗಿ ಹೇಳಿ ಸಾಗು ಹಾಕುತ್ತಿದ್ದಾರೆ.

ಗೊಂದಲ: ಬಿಪಿಎಲ್ ಕುಟುಂಬಗಳ ಪ್ರತಿ ವ್ಯಕ್ತಿಗೆ 7 ಕೆಜಿ ಬದಲಾಗಿ 5 ಕೆಜಿ ಅಕ್ಕಿ ಹಾಗೂ ಪ್ರತಿ ಕಾರ್ಡ್‌ಗೆ ( 2 ತಿಂಗಳಿಗೆ) 4 ಕೆಜಿ ಗೋಧಿ ನೀಡುವಂತೆ ಸರ್ಕಾರ ಸ್ಪಷ್ಟಪಡಿಸಿದೆ. ಆದಾಗ್ಯೂ ಪಡಿತರ ಪ್ರಮಾಣದ ಬಗ್ಗೆ ಜನರಲ್ಲಿ ಗೊಂದಲ ಮೂಡಿದೆ. ಕೆಲವೆಡೆ ನ್ಯಾಯ ಬೆಲೆ ಅಂಗಡಿಯವರು ಹಣ ಪಡೆದು ಪಡಿತರ ವಿತರಿಸುತ್ತಿರುವ ಬಗ್ಗೆಯೂ ದೂರುಗಳಿವೆ.

ಕಾರ್ಡ್‌ದಾರರ ಸಂಖ್ಯೆ: ತಾಲೂಕಿನಲ್ಲಿ 11,392 ಅಂತ್ಯೋದಯ, 80,572 ಬಿಪಿಎಲ್, 4881 ಎಪಿಎಲ್ ಕಾರ್ಡ್‌ದಾರರಿದ್ದಾರೆ. ಪ್ರಸಕ್ತ ತಿಂಗಳಲ್ಲಿ 35,529 ಕ್ವಿಂಟಾಲ್ ಅಕ್ಕಿ, 3,221 ಕ್ವಿಂಟಾಲ್ ಗೋಧಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಚಳ್ಳಕೆರೆ ಆಹಾರ ಇಲಾಖೆ ಶಿರಸ್ತೇದಾರ್ ಟಿ.ಶಿವಾಜಿ ತಿಳಿಸಿದ್ದಾರೆ.

ಪಡಿತರ ನೀಡಲು ಹಣ ಪಡೆದ ದೂರಿನನ್ವಯ 6 ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಕರೀಕೆರೆ ಅಂಗಡಿಯೊಂದರ ಪರವಾನಗಿ ರದ್ದು ಪಡಿಸಲಾಗಿದೆ. ಪ್ರತಿ ಹಳ್ಳಿಯ ಫಲಾನುಭವಿಗಳಿಗೆ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net