ಕರೊನಾ ಎಫೆಕ್ಟ್ 300 ಲೀ. ಹಾಲು ಬೀದಿಪಾಲು

CTD KODIHALLI 2 (2)
Published on

ಚಳ್ಳಕೆರೆ: ಕರೊನಾ ಕಾರಣಕ್ಕೆ ತಾಲೂಕಿನ ಕೋಡಿಹಳ್ಳಿ, ಚಿಕ್ಕಹಳ್ಳಿ ಗ್ರಾಮದಲ್ಲಿ ಪ್ರತಿದಿನ 300 ಲೀಟರ್ ಹಾಲು ಬೀದಿ ಪಾಲಾಗುತ್ತಿದೆ!

ಗ್ರಾಮಗಳ ಇಬ್ಬರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ ಬಳಿಕ ಸೀಲ್‌ಡೌನ್ ಮಾಡಿದ್ದರಿಂದ ಹಾಲು ಒಕ್ಕೂಟ ತಾತ್ಕಾಲಿಕವಾಗಿ ಹಾಲು ಸಂಗ್ರಹ ನಿಲ್ಲಿಸಿತ್ತು.

ಸೋಂಕಿತರಿಬ್ಬರೂ ಆಸ್ಪತ್ರೆಗೆ ದಾಖಲಾಗಿ ಅವರ ಮನೆ ಸುತ್ತಮುತ್ತಲಿನವರ ತಪಾಸಣೆ ವರದಿ ನೆಗೆಟಿವ್ ಬಂದರೂ ಹಾಲು ಖರೀದಿ ಭಾಗ್ಯ ಸಿಕ್ಕಿಲ್ಲ.

ಈ ನಡುವೆ ಉಸ್ತುವಾರಿ ಅಧಿಕಾರಿಯೊಬ್ಬರು ಹಾಲು ಉತ್ಪಾದಕರನ್ನೂ ತಪಾಸಣೆಗೊಳಪಡಿಸಿದ್ದು ಪರೀಕ್ಷಾ ವರದಿ ಬಂದ ಬಳಿಕವೇ ಹಾಲು ಖರೀದಿಸಲು ತಿಳಿಸಿದ್ದಾರೆ ಎನ್ನಲಾಗಿದೆ.

ಆದರೆ, ಹಾಲು ಉತ್ಪಾದಕರು ನಮ್ಮನ್ನಾರೂ ತಪಾಸಣೆಗೊಳಪಡಿಸಿಲ್ಲ. ಮೇಲಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.

ಸೀಲ್‌ಡೌನ್ ಮಾಡಿ ಹೋದ ಅಧಿಕಾರಿಗಳು 15 ದಿನಗಳಾದರೂ ಸಮಸ್ಯೆ ಕೇಳಲು ಬಂದಿಲ್ಲ. ಹಾಲು ಉತ್ಪಾದಿಸುವ 40 ಕುಟುಂಬಗಳು ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಕೂಡಲೇ ಹಾಲು ಖರೀದಿಸಲು ವ್ಯವಸ್ಥೆ ಮಾಡುವಂತೆ ರೈತರಾದ ತಿಪ್ಪಾರೆಡ್ಡಿ, ತಿಪ್ಪೇಸ್ವಾಮಿ, ಮಂಜುನಾಥ, ವಿಜಯೇಂದ್ರ, ಮಹಾಂತೇಶ, ಜಯಣ್ಣ, ಪ್ರಸಾದ್, ಪ್ರದೀಪ್ ಒತ್ತಾಯಿಸಿದ್ದಾರೆ.

ಹಾಲು ಉತ್ಪಾದಕರ ಮಹಿಳಾ ಸ್ವಸಹಾಯ ಸಂಘ

ಪದ್ಮಾವತಿ ಅಧ್ಯಕ್ಷೆ

ಹಾಲು ಉತ್ಪಾದನೆಯಿಂದ ಒಂದು ಕುಟುಂಬ ಮಾಸಿಕ 25,000 - 30,000ರೂ. ಆದಾಯ ಗಳಿಸುತ್ತಿತ್ತು. ಈಗ ಯಾರೂ ಕೊಂಡುಕೊಳ್ಳದ ಕಾರಣ ಆದಾಯ ಕುಂಠಿತವಾಗಿದ್ದು ಜೀವನ ನಡೆಸುವುದು ಕಷ್ಟವಾಗಿದೆ.

ಆರ್.ವಿನೋತ್ ಪ್ರಿಯಾ

ಕಂಟೇನ್‌ಮೆಂಟ್ ವಲಯದಲ್ಲಿ ಆರಂಭದಲ್ಲಿ ಹಾಲು ಖರೀದಿಸುವುದು ಬೇಡ ಎಂದು ಹೇಳಲಾಗಿತ್ತು. ಆದರೆ ಹಾಲನ್ನು ಬೀದಿಗೆ ಸುರಿಯುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ಸೀಲ್‌ಡೌನ್ ಆದ ಗ್ರಾಮಗಳನ್ನು ನೋಡಿಕೊಳ್ಳುತ್ತಿರುವ ಕಮಾಂಡರ್ ಜತೆ ಗ್ರಾಮದ ವಾಸ್ತವ ಸ್ಥಿತಿ ಕುರಿತು ಚರ್ಚಿಸಲಾಗುವುದು. ಸೋಂಕಿತರ ಪ್ರಾಥಮಿಕ ಸಂಪರ್ಕಿತರ ವರದಿ ನೆಗೆಟಿವ್ ಬಂದಿವೆ. ಕೆಲ ನಿಯಮಗಳನ್ನು ಸಡಿಲ ಮಾಡಿ ಅನುಕೂಲ ಕಲ್ಪಿಸಲಾಗುವುದು.
ಎಂ.ಮಲ್ಲಿಕಾರ್ಜುನ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net