ವೇದಾವತಿ ನದಿಗೆ ವಿವಿ ಸಾಗರ ನೀರು ಹರಿಸಲು ಆಗ್ರಹ

SOMAGUDDU
Published on

ಚಳ್ಳಕೆರೆ: ತಾಲೂಕಿನ ಜೀವನಾಡಿ ವೇದಾವತಿ ನದಿಗೆ ವಿವಿ ಸಾಗರದಿಂದ 0.25 ಟಿಎಂಸಿ ನೀರು ಹರಿಸಬೇಕೆಂದು ಆಗ್ರಹಿಸಿ ಮಾ.19ರಂದು ಅಖಂಡ ಕರ್ನಾಟಕ ರೈತ ಸಂಘದಿಂದ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಯುವುದರಿಂದ ನದಿ ಭಾಗದ ಎರಡೂ ಕಡೆಯ 60 ಹಳ್ಳಿಗಳ ಜನ ಮತ್ತು ಜಾನುವಾರುಗಳಿಗೆ ಕುಡಿವ ನೀರು ಲಭ್ಯವಾಗುತ್ತದೆ. ಈ ಭಾಗದ ಬೋರ್‌ವೆಲ್‌ಗಳ ಜಲ ಮರುಪೂರಣಗೊಂಡು ರೈತರ ಬದುಕು ಹಸನಾಗುತ್ತದೆ ಎಂದರು.

ಈಗಾಗಲೇ 0.25 ಟಿಎಂಸಿ ನೀರು ಹರಿಸಲು ಸರ್ಕಾರದಿಂದ ಆದೇಶ ಪಡೆದುಕೊಂಡಿರುವ ಶಾಸಕ ಟಿ. ರಘುಮೂರ್ತಿ ಅವರ ಪ್ರಯತ್ನವನ್ನು ರೈತ ಸಂಘ ಶ್ಲಾಘಿಸುತ್ತದೆ. ಆದರೆ, ಡಿಸಿ ಸರ್ಕಾರದ ಆದೇಶದಂತೆ ಈತನಕ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ಸಂಪೂರ್ಣ ನದಿಯ ಮೂಲಕ ನೀರು ಹರಿಸಬೇಕೆ ಅಥವಾ ಪೈಪ್‌ಲೈನ್ ಮೂಲಕ ಬಿಡಬೇಕೆ ಎಂಬ ಗೊಂದಲ ಜಿಲ್ಲಾಡಳಿತಕ್ಕಿದೆ. ನದಿ ಮೂಲಕ ನೀರು ಹರಿಸುವುದರಿಂದ ತಾಲೂಕಿನ ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂದು ಡಿಸಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಕೆ.ಜಿ.ಭೀಮಾರೆಡ್ಡಿ, ಪಿ.ಸಿ.ಕರಿಯಣ್ಣ, ಗಿರಿಧರಮೂರ್ತಿ, ಗಿರೀಶ್‌ರೆಡ್ಡಿ, ರುದ್ರಮುನಿಯಪ್ಪ, ರುದ್ರಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net