ಆರೋಗ್ಯ ಸ್ಥಿತಿಗೆ ರಕ್ತ ಪರೀಕ್ಷೆ ಕನ್ನಡಿ

CLK HEALTH 03
Published on

ಚಳ್ಳಕೆರೆ: ಆರೋಗ್ಯದ ಮಾಹಿತಿ ತಿಳಿದುಕೊಳ್ಳಲು ರಕ್ತ ಪರೀಕ್ಷೆ ಪ್ರಮುಖವಾಗಿರುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಹೇಳಿದರು.

ತಾಲೂಕು ಆರೋಗ್ಯ ಇಲಾಖೆ ಬಾಲ ಸ್ವಾಸ್ಥ್ಯ ಯೋಜನೆಯಡಿ ನಗರದ ಬಿಎಂಜಿಎಚ್‌ಎಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮಕ್ಕಳಿಗೆ ಆಯೋಜಿಸಿದ್ದ ರಕ್ತದ ಗುಂಪು ಹಾಗೂ ರಕ್ತ ಪರೀಕ್ಷೆ ಶಿಬಿರದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ರಕ್ತದ ಗುಂಪು ಯಾವುದೆಂದು ತಿಳಿದುಕೊಳ್ಳಬೇಕು. ಇದರಿಂದ ರೋಗ ನಿವಾರಣೆಗೆ ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ರಕ್ತದ ಶ್ರೇಷ್ಠತೆ ಕಾಪಾಡಿಕೊಳ್ಳಲು ಗುಣಮಟ್ಟದ ಆಹಾರ ಸೇವನೆ ಜತೆಗೆ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಎಂ.ಸಂಪತ್‌ಕುಮಾರ್ ಮಾತನಾಡಿ, ಇತ್ತೀಚೆಗೆ ಮಾರಣಾಂತಿಕ ಕಾಯಿಲೆ ಸಂಖ್ಯೆ ಹೆಚ್ಚಾಗಿದೆ. ಇವುಗಳ ಪತ್ತೆಗೆ ರಕ್ತ ಪರೀಕ್ಷೆಯೊಂದೇ ಸೂಕ್ತ ವಿಧಾನವಾದ್ದರಿಂದ ಎಲ್ಲ ವಿದ್ಯಾರ್ಥಿಗಳು ರಕ್ತ ಪರೀಕ್ಷೆ ಮಾಡಿಸಿಕೊಂಡು ರಕ್ತ ಗುಂಪು ತಿಳಿದುಕೊಂಡಿರಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಸಹಾಯಕ ಎಸ್.ಬಿ.ತಿಪ್ಪೇಸ್ವಾಮಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ಮೊದಲನೆ ಹಂತದಲ್ಲಿ 10ರಿಂದ 19 ವರ್ಷದೊಳಗಿನ 12,900 ವಿದ್ಯಾರ್ಥಿಗಳ ರಕ್ತ ಪರೀಕ್ಷೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಉಳಿದ ಶಾಲಾ ಮಕ್ಕಳಿಗೆ ರಕ್ತ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net