

ಚಳ್ಳಕೆರೆ: ಅನುದಾನರಹಿತ ಶಾಲಾ ಶಿಕ್ಷಕರು, ಸಿಬ್ಬಂದಿಗೆ ಸರ್ಕಾರವೇ ವೇತನ ಭರಿಸಬೇಕು ಎಂದು ಖಾಸಗಿ ಶಾಲೆಗಳ ಶಿಕ್ಷಕರು ಮಂಗಳವಾರ ಶಿರಸ್ತೇದಾರ್ ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ಖಾಸಗಿ ಶಾಲೆಗಳಲ್ಲಿ ಸುಮಾರು ಎರಡು ಲಕ್ಷ ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ದುಡಿಯುತ್ತಿದ್ದೇವೆ. ಆದರೆ, ಕೋವಿಡ್-19 ನಿಂದಾಗಿ ಶಾಲೆಗಳ ವ್ಯವಸ್ಥೆ ಸ್ಥಗಿತವಾಗಿದೆ. ಶಿಕ್ಷಕ ವೃತ್ತಿಯನ್ನೇ ನಂಬಿಕೊಂಡವರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಖಾಸಗಿ ಶಾಲೆಗಳಿಗೆ ಬರಬೇಕಾಗಿರುವ ಆರ್‌ಟಿಇ ಹಣವನ್ನು ಸರ್ಕಾರ ನೀಡಿಲ್ಲ.
ಪದವೀಧರ ಶಿಕ್ಷಕರಿಂದ ಮತ ಪಡೆದವರು ನಮ್ಮ ಪರಿಸ್ಥಿತಿಗೆ ದನಿ ಎತ್ತುತ್ತಿಲ್ಲ. ಖಾಸಗಿ ಶಾಲೆಗಳ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಯೋಜನೆಯಡಿ ಪರಿಹಾರ ನೀಡಬೇಕು. ವೇತನದ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಬರುವ ಪದವೀಧರ ಚುನಾವಣೆಯನ್ನು ಪದವೀಧರ ಶಿಕ್ಷಕರ ಸಂಘಟನೆಯಿಂದ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಖಾಸಗಿ ಶಾಲೆಗಳ ಶಿಕ್ಷಕರಾದ ಬಿ.ಗೌರೀಶ, ಎಚ್.ನಾಗಭೂಷಣ, ಎಚ್.ಪ್ರಸನ್ನ, ಬಿ.ಟಿ.ಭಕ್ತವತ್ಸಲ, ವಿ.ತಿಪ್ಪೇಸ್ವಾಮಿ, ಒ.ಎನ್.ಮಂಜುನಾಥ, ಎಂ.ನಾಗೇಶ್, ಪಿ.ರವಿ, ಆರ್.ಚೇತನ, ಸಿ.ಮುಕುಂದಾ ಇತರರಿದ್ದರು.