

ಚಳ್ಳಕೆರೆ: ಮುಂಗಾರು ಮಳೆ ಸಂಪೂರ್ಣ ಕುಂಠಿತವಾಗಿರುವ ಹಿನ್ನೆಲೆಯಲ್ಲಿ 85 ಸಾವಿರ ಹೆಕ್ಟರ್ ಮಳೆಯಾಧರಿತ ಶೇಂಗಾ ಬೆಳೆ ನೆಲಕಚ್ಚಿದೆ. 60 ಸಾವಿರ ಜಾನುವಾರುಗಳಿಗೆ ಮೇವಿನ ಕೊರತೆ ಎದುರಿಸುವ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿ ಅರಿತು ಬರಪೀಡಿತ ಪಟ್ಟಿಗೆ ತಾಲೂಕನ್ನು ಸೇರ್ಪಡೆ ಮಾಡಿರುವುದು ಸ್ವಾಗತರ್ಹ ಎಂದು ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಕೂಡಲೇ ಬೆಳೆನಷ್ಟ ಪರಿಹಾರ ಮತ್ತು ಬೆಳೆವಿಮೆ ಸೌಲಭ್ಯ ಕಲ್ಪಿಸಬೇಕು. ಬರಗಾಲದ ಕಾಮಗಾರಿಗಳನ್ನು ಪಂಚಾಯಿತಿ ಹಂತದಲ್ಲಿ ಆರಂಭ ಮಾಡಬೇಕು. ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಕೊಡಬೇಕು. ಜಾನುವಾರುಗಳಿಗೆ ಗೋಶಾಲೆ ಆರಂಭಿಸಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಮಾಜಿ ಸದಸ್ಯ ಎನ್.ಸಿ.ನರಸಿಂಹಯ್ಯ, ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಮುಖಂಡರಾದ ಕೆ.ಚಿಕ್ಕಣ್ಣ, .ಜಿ.ತಿಪ್ಪೇಸಾಮಿ, ಕೆ.ವಿ.ಪ್ರಸನ್ನ, ಹೊರಕೆರೆ ರಂಗಸ್ವಾಮಿ, ನಾಗಭೂಷಣ್ ಆಗ್ರಹಿಸಿದ್ದಾರೆ.