

ಚಳ್ಳಕೆರೆ: ತಾಲೂಕಿನ ರೇಣುಕಾಪುರ ಸಮೀಪದ ವೇದಾವತಿ ನದಿ ವೀಕ್ಷಣೆಗೆ ತೆರಳಿದ್ದ ಯುವತಿಯೊಬ್ಬಳು ಬುಧವಾರ ಕಾಲುಜಾರಿ 20 ಅಡಿ ಆಳದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾಳೆ.
ರೇಣುಕಾಪುರ ಗ್ರಾಮದ ಸುಜಾತಾ (22) ಮೃತಪಟ್ಟ ಯುವತಿ. ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ದಂಧೆಗೆ ಮೂರನೇ ಬಲಿ: ವೇದಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ದಂಧೆ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಆಗುತ್ತಿಲ್ಲ. ದಂಧೆಕೋರರು ಅಲ್ಲಲ್ಲಿ ಮರಳು ಎತ್ತಿ 20 ಅಡಿ ಆಳದ ಗುಂಡಿ ಬಿಡುತ್ತಿದ್ದು, ಅಲ್ಲಿ ನೀರು ನಿಲ್ಲುತ್ತಿದೆ.
ವಿವಿಧ ಕಾರಣಗಳಿಗಾಗಿ ನದಿಗೆ ಹೋಗುವವರು ಗುಂಡಿ ಆಳದ ಕುರಿತು ಅರಿವು ಇಲ್ಲದೆ ಅದರಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬುಧವಾರ ನೀರು ಹರಿಯುತ್ತಿರುವ ನದಿ ನೋಡಲು ಹೋಗಿ 20 ಅಡಿ ಆಳದ ಗುಂಡಿಗೆ ಯುವತಿ ಬಲಿಯಾಗಿದ್ದಾಳೆ.
ಅದೇ ರೀತಿ 9 ತಿಂಗಳ ಹಿಂದೆ ಈ ಭಾಗದ ನದಿಪಾತ್ರದಲ್ಲಿ ಮರಳು ಎತ್ತಲು ಅನುಮತಿ ನೀಡದಂತೆ ಸುತ್ತಲ ಗ್ರಾಮಸ್ಥರೊಂದಿಗೆ ರೈತ ಸಂಘಟನೆ ನದಿಗೆ ಇಳಿದು ಪ್ರತಿಭಟನೆ ಮಾಡಲಾಗಿತ್ತು. ಪ್ರತಿಭಟನೆಯನ್ನೂ ಧಿಕ್ಕರಿಸಿ ಮರಳು ಟೆಂಡರ್ ನೀಡಿದ್ದರ ಪರಿಣಾಮ ಲಾರಿಗಳಲ್ಲಿ ಮರಳು ಸಾಗಿಸುತ್ತಿದ್ದರು.
ಈ ವೇಳೆ ಚಿತ್ರನಾಯ್ಕನಹಳ್ಳಿ ಲೋಕೇಶಪ್ಪನ ತೋಟದ ಬಳಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಗೆ ಮರಳು ದಂಧೆಯೇ ಕಾರಣವಾಗಿತ್ತು ಎಂದು ರೈತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ 15 ದಿನಗಳ ಹಿಂದೆ ವೇದಾವತಿ ನೀರು ಸಂಬಂಧ ಭೇಟಿ ನೀಡಿದ್ದು, ಆಳವಾದ ಗುಂಡಿಗಳು ಕಂಡುಬಂದಿರಲಿಲ್ಲ. ಈಗ ಯುವತಿ ಸಾವಿಗೆ ಮರಳು ಗಣಿಗಾರಿಕೆ ಗುಂಡಿಯೇ ಕಾರಣ ಎಂಬ ಸ್ಥಳೀಯರ ಆರೋಪ ಕುರಿತು ಪರಿಶೀಲನೆ ನಡೆಸುತ್ತೇನೆ. ತಪ್ಪು ಕಂಡುಬಂದರೆ ಕ್ರಮ ಖಚಿತ.
ಎಂ.ಮಲ್ಲಿಕಾರ್ಜುನ್ ತಹಸೀಲ್ದಾರ್