

ಚಳ್ಳಕೆರೆ: ಲಾಕ್‌ಡೌನ್‌ನಿಂದ ಮಾರಾಟ ಆಗದೇ ಜಮೀನಿನಲ್ಲೇ ಹಾಳಾಗಿರುವ ಕರಬೂಜ, ಕಲ್ಲಂಗಡಿ, ಪಪ್ಪಾಯಿ, ಈರುಳ್ಳಿ, ಟೊಮ್ಯಾಟೊ ಬೆಳೆಗಾರರಿಗೆ ಸರ್ಕಾರ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದ ಮುಖಂಡರು, ಕಾರ್ಯಕರ್ತರು, ತಾಲೂಕಿನಲ್ಲಿ 20 ಕೋಟಿ ರೂ. ವೆಚ್ಚದ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಗ್ರಾಮೀಣ ಭಾಗದಲ್ಲಿ ಈರುಳ್ಳಿ ಬೆಳೆದಿರುವ ರೈತರು ಮಾರಾಟ ಮಾಡಿಕೊಳ್ಳಲಾಗದೆ ಜಮೀನಿನಲ್ಲೇ ಸಂಗ್ರಹ ಮಾಡಿಕೊಂಡಿದ್ದಾರೆ.
ಮಳೆ ಆರಂಭವಾದರೆ ಬೆಳೆ ಸಂಪೂರ್ಣ ನೀರುಪಾಲಗುತ್ತದೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಈರುಳ್ಳಿ ಖರೀದಿ ಮಾಡಿ ಉಗ್ರಾಣಗಳಲ್ಲಿ ಸಂಗ್ರಹಿಸಿಕೊಳ್ಳಬೇಕು. ತೋಟಗಾರಿಕೆ ಬೆಳೆಗಳ ನಷ್ಟವನ್ನು ಸಂಪೂರ್ಣ ಭರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಟಿ.ಹಂಪಣ್ಣ, ಶ್ರೀನಿವಾಸ ರೆಡ್ಡಿ, ದಯಾನಂದಮೂರ್ತಿ, ತಿಪ್ಪೇಸ್ವಾಮಿ ಇತರರಿದ್ದರು.
ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಹೇಳಿಕೆ: ಈಗಾಗಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಗ್ರಾಮ ಲೆಕ್ಕಾಧಿಕಾರಿ ಸಮ್ಮುಖದಲ್ಲಿ ಜಮೀನುಗಳಿಗೆ ತೆರಳಿ ನಷ್ಟಗೊಂಡ ಬೆಳೆಯ ಜಿಪಿಎಸ್ ಪೋಟೊ ಸಹಿತ ವರದಿ ಸಂಗ್ರಹಿಸಲಾಗುತ್ತಿದೆ. ಶೀಘ್ರವೇ ಸರ್ಕಾರಕ್ಕೆ ಕಳಿಸಿಕೊಡಲಾಗುವುದು.