ರೈತ ವಿರೋಧಿ ಕಾಯ್ದೆ ಜಾರಿ ಬೇಡ

CLK RAITARU 20
Published on

ಚಳ್ಳಕೆರೆ: ರೈತ ವಿರೋಧಿ ಕಾಯ್ದೆ ಜಾರಿಗೆ ತರಲು ಹೊರಟಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಎಚ್ಚರಿಕೆ ನೀಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಹೋರಾಟ ಸಂಘಟನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಶೇ.65ರಷ್ಟು ರೈತಾಪಿ ಸಮುದಾಯವಿದೆ. ಕೃಷಿಕರ ಹಿತ ಕಾಪಾಡಬೇಕಾದ ಸರ್ಕಾರಗಳೂ ರೈತ ವಿರೋಧಿ ಕಾನೂನು ರೂಪಿಸಲು ಮುಂದಾಗಿವೆ ಎಂದು ದೂರಿದರು.

ಕೃಷಿ ಮಾರುಕಟ್ಟೆ ವ್ಯವಹಾರಗಳನ್ನು ಖಾಸಗೀಕರಣ ಮಾಡುವುದು ಮತ್ತು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ವಿಚಾರವನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದಲ್ಲಿ ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಾಣಿ ವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆ ನೀರು ಬಂದ ಬಳಿಕ ಜಿಲ್ಲೆ ಆರು ತಾಲೂಕುಗಳಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಬೇಕು. ಬರಪೀಡಿತ ಜಿಲ್ಲೆಗೆ ಬೇರೆ ಬೇರೆ ಮೂಲಗಳಿಂದ ನೀರು ತರುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ಸಂಘದ ತಾಲೂಕಾಧ್ಯಕ್ಷ ಕೆ.ಸಿ.ಶ್ರೀಕಂಠಮೂರ್ತಿ, ವಡೇರಹಳ್ಳಿ ಬಸವರಾಜ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ ಮತ್ತಿತರರು ಇದ್ದರು.

ಸಕಾಲಕ್ಕೆ ಮಳೆ ಇಲ್ಲದ ಕಾರಣ ಕೃಷಿ ಚಟುವಟಿಕೆಯಿಂದ ರೈತರಿಗೆ ಲಾಭವಾಗುತ್ತಿಲ್ಲ. ಕೃಷಿಕ ಸಾಲಗಾರನಾಗುತ್ತಿದ್ದಾನೆ. ಸರ್ಕಾರಕ್ಕೆ ಕಟ್ಟುವ ಬೆಳೆ ವಿಮೆ ಅರ್ಹರಿಗೆ ತಲುಪುವ ಕೆಲಸವಾಗುತ್ತಿಲ್ಲ. ಕೋವಿಡ್-19 ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಸರ್ಕಾರದಿಂದ ವಿಶೇಷ ಯೋಜನೆಗಳು ಜಾರಿಯಾಗಬೇಕು.
> ಈಚಘಟ್ಟದ ಸಿದ್ದವೀರಪ್ಪ
ರಾಜ್ಯ ಪ್ರ.ಕಾರ್ಯದರ್ಶಿ, ರೈತಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net