ಬೂದಿಹಳ್ಳಿ ನದಿಗೂ ಬಾಗಿನ ಅರ್ಪಿಸಿ

CLK VEDAVATI 02
Published on

ಚಳ್ಳಕೆರೆ: ತಾಲೂಕಿನ ಬೂದಿಹಳ್ಳಿ ಸಮೀಪದ ವೇದಾವತಿ ನದಿಗೂ ಬಾಗಿನ ಅರ್ಪಿಸಬೇಕು ಎಂದು ಬೂದಿಹಳ್ಳಿ ಗ್ರಾಮಸ್ಥರು, ರೈತರು ಖಾಲಿ ಇರುವ ನದಿಪಾತ್ರಕ್ಕಿಳಿದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವೇದಾವತಿ ನದಿಯಲ್ಲಿ ನೀರು ಹರಿದಿರುವ ಇತಿಹಾಸ ಇಲ್ಲ. ನಾವು ಹರಿಸುತ್ತಿದ್ದೇವೆ ಎಂದು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಸೇರಿ ಕೆಲ ನಾಯಕರು ಅಬ್ಬರದ ಪ್ರಚಾರ ಮಾಡಿದ್ದರು.

ಕ್ಷೇತ್ರದ ಗಡಿಭಾಗ ಮಿಟ್ಲಕಟ್ಟೆ ದಾಟಿ ಡಿಪಿಟಿ ಡ್ಯಾಂವರೆಗೂ ನೀರು ಹರಿಯಲಿದೆ ಎಂದು ಹೇಳಲಾಗಿತ್ತು. ಆದರೆ, ಇನ್ನು 15 ಕಿ.ಮೀ. ದೂರವಿರುವ ಬೂದಿಹಳ್ಳಿಗೆ ನೀರು ಬಂದಿಲ್ಲ ಎಂದು ದೂರಿದರು.

ಮೊಳಕಾಲ್ಮೂರು ಕ್ಷೇತ್ರದ ಪ್ರತಿಹಳ್ಳಿಗಳಿಗೂ ನೀರು ತುಂಬಿಸಲಾಗಿದೆ ಎಂದು ಬಿಂಬಿಸಲಾಗಿದೆ. ಆದರೆ, ನದಿ ಸಮೀಪದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಇಲ್ಲಿನ ಬೆಳೆಗಳು ನೀರಿಲ್ಲದೆ ಒಣಗಿವೆ. ಜಾನುವಾರುಗಳಿಗೆ ನೀರು, ಮೇವು ಇಲ್ಲ. ಇಂತಹ ಪರಿಸ್ಥಿತಿಯಲ್ಲೂ ಜನಪ್ರತಿನಿಧಿಗಳಿಂದ ಸ್ಪಂದನೆ ಇಲ್ಲ ಎಂದು ಅಳಲು ತೋಡಿಕೊಂಡರು.

ಗಡಿಭಾಗದ ಹತ್ತಾರು ಹಳ್ಳಿಗಳಿಗೆ ಯಾರೂ ಮೂಲ ಸೌಕರ್ಯ ಕಲ್ಪಿಸಿಲ್ಲ. ಚುನಾವಣೆ ವೇಳೆ ಮಾತ್ರ ಮತ ಕೇಳಲು ಬರುತ್ತಾರೆ. ಚಳ್ಳಕೆರೆ ತಾಲೂಕಿನ ಗಡಿಗ್ರಾಮಗಳ ಜನರು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಮತದಾನ ಮಾಡುತ್ತಾರೆ.

ದೂರು ನೀಡಲು ಪರಶುರಾಮಪುರ ಪೊಲೀಸ್ ಠಾಣೆಗೆ ಹೋದರೆ, ವ್ಯಾಜ್ಯಗಳ ಪರಿಹಾರಕ್ಕೆ ಮೊಳಕಾಲ್ಮೂರಿನ ನ್ಯಾಯಾಲಯಕ್ಕೆ ಹೋಗಬೇಕು. ಸರಿಯಾದ ರಸ್ತೆ, ಬಸ್ ಸಂಚಾರವೂ ಇಲ್ಲ. ಇದು ಹೀಗೆ ಮುಂದುವರಿದರೆ ಜಿಲ್ಲಾಡಳಿತದ ತನಕ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರಾದ ರಾಜು, ಪಾಲಯ್ಯ, ಗೋವಿಂದಪ್ಪ, ಮಂಜುನಾಥ, ಮಹೇಶ್, ಟಿ.ರಾಜು, ಅಶೋಕ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net