ಜಿಲ್ಲೇಲಿ 1.42 ಲಕ್ಷ ಹೆ. ಶೇಂಗಾ ಬಿತ್ತನೆ ಗುರಿ

K HALLI KRUSHI
Published on

ಚಳ್ಳಕೆರೆ: ಮುಂಗಾರು ಬೆಳೆಯಾಗಿ ಜಿಲ್ಲೆಯಲ್ಲಿ 1.42 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಶೇಂಗಾ ಬಿತ್ತನೆಗೆ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ತಿಳಿಸಿದ್ದಾರೆ.

ಚಳ್ಳಕೆರೆ ಮತ್ತು ಹಿರಿಯೂರು ತಾಲೂಕಿನಲ್ಲಿ ಅತಿ ಹೆಚ್ಚು ಶೇಂಗಾ ಬಿತ್ತನೆ ಮಾಡಲಾಗುತ್ತದೆ. ಮುಂಗಾರು ಬಿತ್ತನೆಗಾಗಿ 18 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಸಂಗ್ರಹಿಸಲಾಗಿದೆ. ಕೆಒಎಫ್ ನಿಂದ 21500 ಕ್ವಿಂಟಾಲ್ ಶೇಂಗಾ ಸರಬರಾಜು ಮಾಡಿಕೊಳ್ಳಲು ಸಿದ್ಧತೆ ನಡೆದಿದೆ.

ಚಳ್ಳಕೆರೆ ತಾಲೂಕಿನಲ್ಲಿ ನಗರದ ಎಪಿಎಂಸಿ ಯಾರ್ಡ್, ಪರಶುರಾಂಪುರ, ದೊಡ್ಡ ಉಳ್ಳಾರ್ತಿ, ನಾಯಕನಹಟ್ಟಿ, ತಳಕು ಮತ್ತಿತರೆಡೆ ಶೇಂಗಾ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. 1 ಕ್ವಿಂಟಾಲ್ ಶೇಂಗಾಕ್ಕೆ 7300 ರೂ. ನಿಗದಿ ಮಾಡಲಾಗಿದೆ. ಇದರಲ್ಲಿ 1400 ರೂ. ಸಾಮಾನ್ಯ ವರ್ಗದ ರೈತರಿಗೆ, 2100 ರೂ. ಎಸ್ಸಿ-ಎಸ್ಟಿ ವರ್ಗದವರಿಗೆ ಸಬ್ಸಿಡಿ ಸೌಲಭ್ಯ ಇದೆ ಎಂದು ಹೇಳಿದ್ದಾರೆ.

ರೈತಮುಖಂಡ ರೆಡ್ಡಿಹಳ್ಳಿ ವೀರಣ್ಣ ಹೇಳಿಕೆ: ಲಾಕ್‌ಡೌನ್‌ನಿಂದ ರೈತರು ಕೈಗೆ ಬಂದ ಫಸಲು ಮಾರಲಾಗದೆ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ಬಿತ್ತನೆ ಶೇಂಗಾ ಬೀಜಗಳನ್ನು ಕಿಟ್ ರೂಪದಲ್ಲಿ ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು.

ರೈತಸಂಘ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿಕೆ: ಪ್ರಸಕ್ತ ವರ್ಷ ಕೇವಲ ಮೂರೂವರೆ ಸಾವಿರಕ್ಕೆ ರೈತರಿಂದ ಶೇಂಗಾ ಖರೀದಿಸಿ, ಈಗ ಬಿತ್ತನೆ ಬೀಜವನ್ನು 7300 ರೂ. ಗೆ ಮಾರುವುದು ಯಾವ ನ್ಯಾಯ. ಕರೊನಾದಿಂದ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಉಚಿತವಾಗಿ ಬಿತ್ತನೆ ಬೀಜ ವಿತರಿಸಬೇಕು. ಕಳೆದ ವರ್ಷದ ಬೆಳೆ ವಿಮೆ ಶೀಘ್ರವೇ ರೈತರ ಖಾತೆಗೆ ಜಮೆ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net