ವೇದಾವತಿಗೆ ವಿವಿ ಸಾಗರದ ನೀರು

VV Sagara
Published on

ಚಳ್ಳಕೆರೆ: ವಾಣಿ ವಿಲಾಸ ಸಾಗರದಿಂದ ತಾಲೂಕಿನ ವೇದಾವತಿ ನದಿಗೆ ಕುಡಿಯುವ ಉದ್ದೇಶಕ್ಕೆ 0.25 ಟಿಎಂಸಿ ಅಡಿ ನೀರು ಹರಿಸಲು ವಿಶ್ವೇಶ್ವರಯ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾಧಿಕಾರಿಗೆ ಅನುಮೋದನಾ ಪತ್ರ ಕಳುಹಿಸಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

ಇದರ ಉಲ್ಲೇಖದಲ್ಲಿ 2015ರ ಮಾರ್ಚ್ ತಿಂಗಳಲ್ಲಿ ಶಾಸಕ ಟಿ.ರಘುಮೂರ್ತಿ, ತಾಲೂಕಿನ ವೇದಾವತಿ ನದಿ ಭಾಗದ ಹಳ್ಳಿಗಳ ಕುಡಿವ ನೀರಿನ ಅನುಕೂಲ ಮತ್ತು ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲು ವಿವಿ ಸಾಗರದಿಂದ 0.25 ಟಿಎಂಸಿ ಅಡಿ ನೀರು ಹರಿಸಬೇಕೆಂಬ ಬೇಡಿಕೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮತ್ತು ಸಂಸದ ಎ.ನಾರಾಯಣಸ್ವಾಮಿ ಅವರ ಮನವಿಯಂತೆ ವೇದಾವತಿ ನದಿಗೆ ನೀರು ಹರಿಸಲು ಆದೇಶ ನೀಡಲಾಗಿದೆ.

ಈಗಾಗಲೇ ನದಿ ಭಾಗದಲ್ಲಿ ನಿರ್ಮಿಸಿರುವ ಬ್ಯಾರೇಜ್‌ಗಳು ಬರಿದಾಗಿವೆ. ಇದರಿಂದ 60 ಹಳ್ಳಿಗಳಿಗೆ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಈ ಪರಿಸ್ಥಿತಿ ನಿರ್ವಹಣೆಗೆ ನೀರು ಅಗತ್ಯ ಎಂಬ ಶಾಸಕರ ಬೇಡಿಕೆಯಂತೆ ಜಲ ನಿಗಮದಿಂದ ನೀರು ಹರಿಸಲು ಆದೇಶ ದೊರೆತಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಜೆಪಿ ಸಂಭ್ರಮ: ವೇದಾವತಿ ನದಿಗೆ ವಿವಿ ಸಾಗರದಿಂದ 0.25 ಟಿಎಂಸಿ ಅಡಿ ನೀರು ಹರಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪರಶುರಾಮಪುರ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಪಂ ಸದಸ್ಯರಾದ ಸಿದ್ದೇಶಣ್ಣ, ಬಿ.ತಿಪ್ಪೇಸ್ವಾಮಿ, ಎಸ್.ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net