ಬದುಕಿನ ಪಾಠ ಕಲಿಸಿದ ಕರೊನಾ

CLK SWAMIJI 1
Published on

ಚಳ್ಳಕೆರೆ: ಕರೊನಾ ವೈರಸ್ ಬಹಳಷ್ಟು ಜನರಿಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ತಾಪಂ ಆವರಣದಲ್ಲಿ ಸೋಮವಾರ ಪ್ರಕಾಶ್ ಐರನ್ ಸ್ಟೀಲ್ ಕಂಪನಿ ವತಿಯಿಂದ 650 ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದರು.

ಕರೊನಾ ಮಹಾಮಾರಿಗೆ ಅಮೆರಿಕದಂತಹ ಶ್ರೀಮಂತ ರಾಷ್ಟ್ರಗಳೇ ತತ್ತರಿಸಿವೆ. ನಮ್ಮ ದೇಶದಲ್ಲಿ ಸ್ಪಂದನೆ ಮತ್ತು ಪರಸ್ಪರ ಜಾಗೃತಿಯಿಂದ ವೈರಸ್ ನಿಯಂತ್ರಣದಲ್ಲಿದೆ. ಇನ್ನೂ ಹೆಚ್ಚಿನ ಜಾಗೃತಿ ಜನರಲ್ಲಿ ಬರಬೇಕು. ದೈಹಿಕ ಅಂತರ, ವೈಯಕ್ತಿಕ ಶುಚಿತ್ವ, ಕಡ್ಡಾಯವಾಗಿ ಮಾಸ್ಕ್ ಧರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಲಾಕ್‌ಡೌನ್‌ನಿಂದ ಚರ್ಚ್, ಮಸೀದಿ, ದೇವಾಲಯಗಳು ಬಾಗಿಲು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ಬಂತು. ಆದರೆ, ಮಠಗಳು ಬಾಗಿಲು ತೆಗೆದು ಕಷ್ಟದಲ್ಲಿದ್ದವರಿಗೆ ನೆರವು ನೀಡಲು ಅವಕಾಶ ಸಿಕ್ಕಿದೆ. ಇದು ಭಗವಂತನ ಅನುಗ್ರಹ. ಈ ಸಮಾಜ ಸೇವೆಯನ್ನು ಎಲ್ಲ ಮಠಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಲೂಕಿನ ಜನರ ಸಂಕಷ್ಟಕ್ಕೆ ಶಾಸಕ ರಘುಮೂರ್ತಿ ಧ್ವನಿಯಾಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಇತರ ಶಾಸಕರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕರೊನಾ ಸೇನಾನಿಗಳಿಗೆ ಉಳ್ಳವರು ಸಹಾಯ ಹಸ್ತ ಚಾಚಬೇಕೆಂದು ಕೋರಿಕೊಂಡಿದ್ದೆವು. ಇದಕ್ಕೆ ಪ್ರಕಾಶ್ ಐರನ್ ಸ್ಟೀಲ್ ಕಂಪನಿ ಸ್ಪಂದಿಸಿ 650 ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ಒದಗಿಸಿದೆ. ಜತೆಗೆ ನಗರಸಭೆ ಪೌರಕಾರ್ಮಿಕರು ಮತ್ತು ತಾಲೂಕಿನ 26 ಪಂಚಾಯಿತಿಗಳ ಸ್ವಚ್ಛತಾ ಸಿಬ್ಬಂದಿಗೂ ನೆರವು ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಮುರುಘಾ ಮಠ ತ್ರಿವಿಧ ದಾಸೋಹಕ್ಕೆ ಹೆಸರಾಗಿದೆ. ಪ್ರಸ್ತುತ ಲಾಕ್‌ಡೌನ್ ಪರಿಸ್ಥಿತಿಯಲ್ಲಿ 10 ಸಾವಿರ ಜನಕ್ಕೆ ಅಗತ್ಯ ನೆರವು ನೀಡಿ ಬಡ ಕುಟುಂಬಗಳಿಗೆ ಆಸರೆಯಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ತಾಪಂ ಇಒ ಶ್ರೀಧರ್ ಬಾರಿಕರ್, ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಮಾಜಿ ಸದಸ್ಯ ಟಿ.ರವಿಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net