ಕೋಡಿಹಳ್ಳಿ-ಚಿಕ್ಕಹಳ್ಳಿಗೆ ಜಿಲ್ಲಾಧಿಕಾರಿ ಭೇಟಿ

CLK DC BHETI 19
Published on

ಚಳ್ಳಕೆರೆ: ತಾಲೂಕಿನ ಕೋಡಿಹಳ್ಳಿ ಮತ್ತು ಚಿಕ್ಕಹಳ್ಳಿಗೆ ಮಂಗಳವಾರ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಭೇಟಿ ನೀಡಿ ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.

ಲಾಕ್‌ಡೌನ್ ಕಾರಣಕ್ಕೆ ಊರಿಗೆ ಬಂದೆವು. ಈಗ ಗ್ರಾಮವನ್ನು ಸೀಲ್‌ಡೌನ್ ಮಾಡಿದ್ದರಿಂದ ಉದ್ಯೋಗವಿಲ್ಲದೆ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗಿದೆ ಎಂದು ವಲಸೆ ಕಾರ್ಮಿಕರು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ತಕ್ಷಣವೇ ಗ್ರಾಮದಲ್ಲಿ ಕೆಲಸ ಒದಗಿಸಲು ಸಾಧ್ಯವಿಲ್ಲ. ಮರಳಿ ನಗರಕ್ಕೆ ಹೋಗುವವರಿದ್ದರೆ ಕಳಿಸುವ ವ್ಯವಸ್ಥೆ ಮಾಡುತ್ತೇವೆ. ಇಲ್ಲಿಯೇ ಇದ್ದು ಕೃಷಿ ಚಟುವಟಿಕೆ ಮಾಡಿದರೆ ಅಡ್ಡಿಯಿಲ್ಲ ಎಂದರು.

ವೈರಸ್ ಸೋಂಕಿತ ಕುಟುಂಬ ಗ್ರಾಮಕ್ಕೆ ಬಂದು ನಾಲ್ಕು ದಿನವಾದರೂ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲವೇಕೆ ಎಂದು ಗ್ರಾಪಂ ಅಧ್ಯಕ್ಷ ಎನ್.ಎಚ್. ರಾಜಣ್ಣ ಅವರನ್ನು ಪ್ರಶ್ನಿಸಿದರು.

ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ, ತಾಪಂ ಇಒ ಶ್ರೀಧರ್ ಬಾರಿಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ಎನ್. ಪ್ರೇಮಸುಧಾ, ಡಾ. ಅಮಿತ್ ಗುಪ್ತಾ, ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ, ಪಿಡಿಒ ಉಮಕ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net