ಶಾಸಕರಿಂದ ಕಾರ್ಮಿಕರ ಸಮಾಲೋಚನೆ

CLK MLA BETI 16
Published on

ಚಳ್ಳಕೆರೆ: ನಗರದ ಹೊರವಲಯದ ಕಿತ್ತೂರು ರಾಣಿ ಚನ್ನಮ್ಮ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಗುರುವಾರ ಭೇಟಿ ನೀಡಿದ ಶಾಸಕ ಟಿ.ರಘುಮೂರ್ತಿ, ಅಲ್ಲಿ ವಾಸ್ತವ್ಯ ಹೂಡಿರುವ 174 ಕೂಲಿ ಕಾರ್ಮಿಕರ ಆರೋಗ್ಯ ವಿಚಾರಿಸಿದರು.

ರಾಮನಗರಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದ ಯಾದಗಿರಿ, ಸುರಪುರ, ದೇವದುರ್ಗ, ಜೇವರ್ಗಿ ಮೂಲದ ಕಾರ್ಮಿಕರನ್ನು ತಾಲೂಕು ಆಡಳಿತ ಬುಧವಾರ ರಾತ್ರಿ ವಶಕ್ಕೆ ಪಡೆದು ವಸತಿ ಶಾಲೆಗಳಲ್ಲಿ ಇರಿಸಿತ್ತು.

ಈ ವಿಷಯ ತಿಳಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಅವರ ಕುಂದುಕೊರತೆ ಆಲಿಸಿದರು. ದೇಶದೆಲ್ಲೆಡೆ ಕರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ತಮ್ಮನ್ನು ಇಲ್ಲಿಯೇ ಉಳಿಸಿಕೊಳ್ಳಲಾಗಿದೆ. ನೀವ್ಯಾರು ಚಿಂತೆ ಮಾಡಬೇಕಿಲ್ಲ. ನಿಮಗೆ ಊಟ ವಸತಿ ಜತೆಗೆ ಅಗತ್ಯ ಸೌಕರ್ಯವನ್ನು ತಾಲೂಕು ಆಡಳಿತ ಒದಗಿಸುತ್ತದೆ ಎಂದು ಧೈರ್ಯ ತುಂಬಿದರು.

ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ತಾಪಂ ಇಒ ಶ್ರೀಧರ್ ಬಾರಿಕರ್, ಸಮಾಜ ಕಲ್ಯಾಣ ಇಲಾಖೆ ಮಂಜಣ್ಣ, ಮಾಲತಿ, ನಗರಸಭೆ ಸದಸ್ಯರಾದ ಕೆ.ವೀರಭದ್ರಯ್ಯ, ವೈ.ಪ್ರಕಾಶ್, ಬಿ.ಟಿ.ರಮೇಶ್ ಗೌಡ, ಮುಖಂಡರಾದ ಎಸ್.ಎಚ್.ಸೈಯದ್, ಸಿ.ಟಿ.ಶ್ರೀನಿವಾಸ್, ಡಿ.ಕೆ.ಕಾಟಯ್ಯ, ಓ.ಆಂಜನೇಯ, ಗಾಂಧಿನಗರ ಕೃಷ್ಣ, ಪ್ರಹ್ಲಾದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net