ಬ್ಯಾಗ್‌ಲೆಸ್ ಡೇ ನಿಮಿತ್ತ ಮಕ್ಕಳ ಜಮೀನು ಭೇಟಿ

dj clk school
Published on

ಚಳ್ಳಕೆರೆ: ಸರ್ಕಾರದ ಆದೇಶದಂತೆ ಶನಿವಾರ ಬ್ಯಾಗ್‌ಲೆಸ್ ಡೇ ಹಿನ್ನೆಲೆ ತಾಲೂಕಿನ ಬಂಡೆಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನು ಜಮೀನುಗಳಿಗೆ ಕರೆದುಕೊಂಡು ಹೋಗಿ ಕೂಲಿಕಾರ್ಮಿಕರ ಬದುಕು, ಭವಣೆ ಜತೆಗೆ ಬೆಳೆ ಬೆಳೆಯುವ ವಿಧಾನ ಬಗ್ಗೆ ಜಾಗೃತಿ ಮೂಡಿಸಲಾಯಿತು.

ರೈತ ಚಂದ್ರಶೇಖರ್ ಮಾತನಾಡಿ, ಹೊಲ-ಗದ್ದೆಗಳಲ್ಲಿ ದುಡಿಯುವ ಕಾರ್ಮಿಕರ ಮತ್ತು ಬೆಳೆ ಬೆಳೆಯುವ ವಿಧಾನದ ಬಗ್ಗೆ ಶಾಲಾ ಮಕ್ಕಳಿಗೆ ತಿಳಿಸಲು ಹೊಲಕ್ಕೆ ಕರೆದುಕೊಂಡು ಬಂದಿರುವುದು ಸ್ವಾಗತಾರ್ಹ ಎಂದರು.

ಪ್ರಸ್ತುತ ಮಾರುಕಟ್ಟೆ ದರದಲ್ಲಿ ಬೀಜ ಮತ್ತು ಗೊಬ್ಬರ ಖರೀದಿ ಮಾಡಿಕೊಂಡು ರೈತ ತನ್ನ ಹೊಲದಲ್ಲಿ ಬೆಳೆ ಇಟ್ಟು ಪೋಷಣೆ ಮಾಡುವುದು ಕಷ್ಟದ ಕೆಲಸವಾಗಿದೆ.

ಕೂಲಿ ಕಾರ್ಮಿಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೊಲ-ಗದ್ದೆಗಳಲ್ಲಿ ದಿನವಿಡೀ ಶ್ರಮವಹಿಸಿ ದುಡಿಯುತ್ತಾರೆ.

ರೈತರು ಮತ್ತು ಕೂಲಿ ಕಾರ್ಮಿಕರ ಪರಿಶ್ರಮದಿಂದ ಬೆಳೆಯುವ ಬೆಳೆಯಿಂದ ದೇಶದ ಆಹಾರ ಭದ್ರತೆ ಕಾಪಾಡಿಕೊಳ್ಳುತ್ತೇವೆ.

ಶಾಲೆಗೆ ಹೋಗುವ ಮಕ್ಕಳು ತಮ್ಮ ಕುಟುಂಬದ ತಂದೆ-ತಾಯಂದಿರ ಪರಿಸ್ಥಿತಿ ಮತ್ತು ಕೂಲಿ ಬದುಕಿನ ಕಷ್ಟ ತಿಳಿದುಕೊಳ್ಳಬೇಕು ಎಂದರು.

ಹೊಲದಲ್ಲಿ ಉತ್ತಮ ಬೆಳೆ ಬೆಳೆಯಲು ಬೆಳೆಯ ಪಕ್ಕದಲ್ಲಿ ಬೆಳೆಯುವ ಕಳೆಯನ್ನು ಕಿತ್ತು ಹೊರಗೆ ಹಾಕುವಂತೆ, ಸಮಯ ಹಾಳು ಮಾಡುವುದು ಮತ್ತು ಕೆಟ್ಟ ಚಿಂತನೆ ಮಾಡುವುದನ್ನು ಬಿಟ್ಟು ಕಲಿಕೆಯಲ್ಲಿ ಸಾಧನೆ ಮಾಡುವ ಗುರಿ ಹೊಂದಬೇಕು ಎಂದು ತಿಳಿಹೇಳಿದರು.

ಮುಖ್ಯಶಿಕ್ಷಕ ಆರ್. ನಾಗರಾಜ ಮಾತನಾಡಿದರು. ಸಹಶಿಕ್ಷಕ ಎಚ್.ಹನುಮಂತಪ್ಪ, ಕೂಲಿ ಕಾರ್ಮಿಕರಾದ ಜಯಮ್ಮ, ರಾಜಮ್ಮ, ವಿನೋದ, ಗಂಗಮ್ಮ, ಬೋರಯ್ಯ, ಪಾಪಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net