ವಲಸೆ ಗ್ರಾಮದ ವಾಸಿ ಮೇಲೆ ಹಲ್ಲೆಗೆ ಖಂಡನೆ

Challakere,
Published on

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿಯ ವಲಸೆ ಗ್ರಾಮದ ಲಂಬಾಣಿ ಸಮುದಾಯದ ಶಂಕ್ರನಾಯ್ಕ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಲಾಯಿತು.

ರಾಜ್ಯ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಕಾರ್ಯಕರ್ತರು, ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ರೆಹನ್ ಪಾಷ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮ ದೇವತೆ ಚಳ್ಳಕೆರಮ್ಮ ದೇವಸ್ಥಾನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ನೆಹರು ವೃತ್ತದ ಮಾರ್ಗವಾಗಿ ತಾಲೂಕು ಕಚೇರಿಗೆ ಆಗಮಿಸಿದರು.

ಜಮೀನಿಗೆ ಕೆಲಸಕ್ಕೆ ಶಂಕ್ರನಾಯ್ಕ ತೆರಳಿದ್ದ ವೇಳೆ ಆರೋಪಿಗಳು ಕಲ್ಲು ಮತ್ತು ದೊಣ್ಣೆಯಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡಿರುವ ಶಂಕ್ರನಾಯ್ಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿರುವ ಬಗ್ಗೆ ತಳಕು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಆದರೆ, ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಈ ಕೂಡಲೇ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸಬೇಕು. ಹಲ್ಲೆಗೊಳಗಾಗಿರುವ ಕುಟುಂಬಕ್ಕೆ ದೌರ್ಜನ್ಯ ಕಾಯ್ದೆಯಡಿ ಪರಿಹಾರ ನೀಡಬೇಕು ಎಂದು ತಿಳಿಸಿದರು.

ಅಭಿಯಾನ ಸಮಿತಿ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ನಿಂಗನಾಯ್ಕ, ಶಂಕರ್‌ನಾಯ್ಕ, ಗೋವಿಂದನಾಯ್ಕ, ಹನುಮನಾಯ್ಕ, ತಿಪ್ಪೇಸ್ವಾಮಿ, ಡಿ.ವಿ.ಗುಂಡನಾಯ್ಕ, ಮೋಹನ್, ಸಂತೋಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net