ಚಾಲಿ ಅಡಕೆ ದರ ಕುಸಿತ

Chali adake
Published on

ಮಂಜುನಾಥ ಸಾಯೀಮನೆ ಶಿರಸಿ
ಜೂನ್ ಆರಂಭದಲ್ಲಿ ಕುಸಿಯಲಾರಂಭಿಸಿದ ಚಾಲಿ ಅಡಕೆ ದರ ಏರಿಕೆ ಕಂಡಿಲ್ಲ. ಮಳೆಗಾಲದ ಖರ್ಚುಗಳನ್ನು ನಿಭಾಯಿಸುವ ಸಲುವಾಗಿ ರೈತರು ಚಾಲಿ ಅಡಕೆ ಮಾರಾಟ ಮಾಡಬೇಕೇ ಬೇಡವೇ ಎಂಬ ದ್ವಂದ್ವ ನಿಲುವಿನಲ್ಲಿದ್ದಾರೆ.

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಚಾಲಿ ಅಡಕೆಗೆ ಉತ್ತಮ ದರವಿತ್ತು. ಶಿರಸಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ಸರಾಸರಿ 39 ಸಾವಿರ ರೂ. ದರ ಲಭಿಸುತ್ತಿತ್ತು. ಮೇ 23ರಂದು ಪ್ರತಿ ಕ್ವಿಂಟಾಲ್‌ಗೆ 39058 ರೂ. ದರ ಪಡೆದುಕೊಂಡಿದ್ದ ಚಾಲಿ ಅಡಕೆ ಆ ಬಳಿಕ ಇಳಿಮುಖವಾಗುತ್ತಲೇ ಇದೆ. ಮೇ 28ರಂದು 38198, ಜೂ.3ರಂದು 37808, ಜೂ. 11ರಂದು 37499 ರೂ. ಪ್ರತಿ ಕ್ವಿಂಟಾಲ್‌ಗೆ ದರ ಪಡೆದಿತ್ತು. ಆ ಬಳಿಕ ದರ ಇಳಿಕೆಯ ವೇಗ ಜಾಸ್ತಿಯಾಗಿದೆ. ಜು.12ರಂದು 36799, ಜು.17ರಂದು 35918 ರೂ. ದರವಾಗಿದೆ. ಜು.22ರಂದು 32108ರಿಂದ 36159 ರೂ. ಪ್ರತಿ ಕ್ವಿಂಟಾಲ್‌ಗೆ ದರವಾಗಿದೆ. ಸರಾಸರಿ 34400 ರೂ. ದರ ರೈತರಿಗೆ ಲಭಿಸಿದೆ. ಏಪ್ರಿಲ್ ಮೇ ತಿಂಗಳ ದರಕ್ಕೂ, ಈಗಿನ ದರಕ್ಕೂ ಹೋಲಿಕೆ ಮಾಡಿದರೆ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ಸರಾಸರಿ 4500 ರೂ.ನಷ್ಟು ಕಡಿಮೆಯಾಗಿದೆ.

ಕೆಲ ರೈತರು ಒಣಗಿದ ಚಾಲಿ ಅಡಕೆಯನ್ನು ಸಂಗ್ರಹಿಸಿಟ್ಟುಕೊಂಡು ಮಳೆಗಾಲದಲ್ಲಿ ಸುಲಿದು ಮಾರುಕಟ್ಟೆಗೆ ತರುತ್ತಾರೆ. ಸಾಮಾನ್ಯವಾಗಿ ಮೇ ತಿಂಗಳ ವೇಳೆ ಎಲ್ಲ ರೈತರು ಚಾಲಿ ಅಡಕೆ ಮಾರುಕಟ್ಟೆಗೆ ತರುವ ಕಾರಣ ದರ ಸಹ ನಿರೀಕ್ಷಿತ ಮಟ್ಟದಲ್ಲಿ ಏರುವುದಿಲ್ಲ. ಮಳೆಗಾಲದ ಈ ದಿನಗಳಲ್ಲಿ ಚಾಲಿ ಅಡಕೆ ಮಾರುಕಟ್ಟೆಗೆ ಬರುವ ಪ್ರಮಾಣ ಕಡಿಮೆ ಇರುವುದರಿಂದ ಸಹಜವಾಗಿ ದರ ಏರಿರುತ್ತಿತ್ತು. ಶ್ರಾವಣಕ್ಕೆ ಚಾಲಿ ದರ ಏರುತ್ತದೆ ಎಂಬುದು ಹಿರಿಯರ ಅನುಭವದ ಮಾತೂ ಹೌದು. ಆದರೆ, ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ಬೇಸಿಗೆಯಲ್ಲಿ ಜಾಸ್ತಿ ದರ ಲಭಿಸಿ, ಈಗ ಕುಸಿತವಾಗಿದೆ.

ಏಕೆ ಹೀಗೆ ?

ಅಡಕೆ ಅಕ್ರಮ ಆಮದಿನಿಂದಾಗಿಯೇ ದರ ಏರಿಕೆ ಆಗುತ್ತಿಲ್ಲ ಎನ್ನುತ್ತಾರೆ ಸಹಕಾರಿ ಧುರೀಣರು, ವರ್ತಕರು. ಕೇಂದ್ರ ಚುನಾವಣೆಯ ವೇಳೆ ಗಡಿಗಳಲ್ಲಿ ಕಟ್ಟು ನಿಟ್ಟಾಗಿ ನಿಗಾ ವಹಿಸಲಾಗುತ್ತಿತ್ತು. ಆ ವೇಳೆ ದೇಶದೊಳಗೆ ಅಡಕೆ ಅಕ್ರಮ ಆಮದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಚಾಲಿ ಅಡಕೆಗೆ ಉತ್ತಮ ದರ ಲಭಿಸುತ್ತಿತ್ತು. ಆದರೆ, ಈಗ ಬಾಂಗ್ಲಾ ಗಡಿ, ನೇಪಾಳ ಗಡಿ ಮೂಲಕ ಅಕ್ರಮವಾಗಿ ವಿದೇಶಿ ಅಡಕೆ ಉತ್ತರ ಭಾರತದ ಮಾರುಕಟ್ಟೆ ತಲುಪುತ್ತಿವೆ. ಕಡಿಮೆ ದರಕ್ಕೆ ಲಭಿಸುವ ವಿದೇಶಿ ಅಡಕೆಯಿಂದಾಗಿ ಇಲ್ಲಿಯ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಡಿಮೆ ಬೆಲೆಯಲ್ಲಿ ಸಿಗುವ ವಿದೇಶಿ ಅಡಕೆಯಿಂದಾಗಿ ಉತ್ತರ ಭಾರತದ ಅಡಕೆ ದಾಸ್ತಾನುದಾರರು, ವರ್ತಕರು ಅತ್ತಲೇ ಮುಖ ಮಾಡಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಚಾಲಿ ಅಡಕೆ ದರ ಸುಧಾರಿಸುವ ಲಕ್ಷಣವೂ ಇಲ್ಲ ಎಂಬುದು ಅಡಕೆ ಮಾರುಕಟ್ಟೆ ತಜ್ಞರ ಅಭಿಪ್ರಾಯ. ಉತ್ತರ ಕನ್ನಡ ಜಿಲ್ಲೆಯಲ್ಲಿ 12375 ಮೆಟ್ರಿಕ್ ಟನ್‌ಗಳಷ್ಟು ಅಡಕೆ ಉತ್ಪಾದನೆಯಾಗುತ್ತದೆ. ಇದರಲ್ಲಿ ಚಾಲಿ ಅಡಕೆ ಉತ್ಪಾದಿಸುವವರೇ ಅಧಿಕ. ಇದುವರೆಗೆ ರೈತರು ಶೇ. 40ರಷ್ಟನ್ನು ಮಾತ್ರ ಮಾರಾಟ ಮಾಡಿದ್ದು, ಇನ್ನೂ ಶೇ. 60ರಷ್ಟು ಅಡಕೆಯನ್ನು ರೈತರು ಮಾರುಕಟ್ಟೆಗೆ ತರಬೇಕಿದೆ. ಇನ್ನೊಂದೆಡೆ ಅಡಕೆ ಬೆಳೆಯುವ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ, ಬೇಡಿಕೆಗಿಂತ ಜಾಸ್ತಿಯೇ ಅಡಕೆ ಈ ವರ್ಷ ಉತ್ಪಾದನೆಯಾಗುವ ಸಾಧ್ಯತೆ ಇದೆ.

ಕೆಳ ದರ್ಜೆಯ ಅಡಕೆಗಳಾದ ಬಿಳೆಗೋಟು, ಅರಗೆರೆ, ಕೋಕಾಗೆ ಉತ್ತರ ಭಾರತದಿಂದ ಬೇಡಿಕೆಯೇ ಇಲ್ಲವಾಗಿದೆ. ಕಳೆದ ಮೂರು ತಿಂಗಳ ಹಿಂದೆ ಖರೀದಿಸಿದ ಈ ಮಾದರಿಯ ಅಡಕೆ ಸಹ ಇನ್ನೂ ನಮ್ಮಲ್ಲಿಯೇ ಉಳಿದುಕೊಂಡಿದೆ.I ಹೆಸರು ಬಹಿರಂಗಪಡಿಸಲಿಚ್ಛಿಸದ ವರ್ತಕ, ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net