

ರಾಯಚೂರು: ಜಿಲ್ಲಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಪದಚ್ಯುತಿಗೊಳಿಸುವ ಅಧಿಕಾರಿ ಮಹಾಸಭೆಯ ರಾಜ್ಯ ನಿರ್ದೇಶಕರಿಗೆ ನೀಡಿಲ್ಲ. ಸಂಘದ ಬೈಲಾದ ತಿಳುವಳಿಕೆಯಿಲ್ಲದೆ ರಾಜ್ಯ ನಿರ್ದೇಶಕ ಎಂ.ವಸಂತ ಹೇಳಿಕೆ ನೀಡುತ್ತಿದ್ದಾರೆ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ನಾಗಲಿಂಗ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಮಹಾಸಭಾದ ಪದಾಧಿಕಾರಿಗಳಲ್ಲಿ ಗೊಂದಲ ಮೂಡಿಸುತ್ತಿರುವ ಎಂ.ವಸಂತ ಹಾಗೂ ಇತರ ಪದಾಧಿಕಾರಿಗಳ ವಿರುದ್ಧ ಈಗಾಗಲೇ ಮಹಾಸಭಾ ಅಧ್ಯಕ್ಷರಿಗೆ ದೂರು ನೀಡಲಾಗಿದ್ದು, ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಕಳೆದ ನಾಲ್ಕು ತಿಂಗಳಿಂದ ಜಿಲ್ಲಾಧ್ಯಕ್ಷನಾಗಿ ಸಮಾಜವನ್ನು ಕಟ್ಟುವ ಕೆಲಸ ಮಾಡಲಾಗುತ್ತಿದೆ. ಲಿಂಗಸುಗೂರಿನಲ್ಲಿ ಜರುಗಿದ ಸಮಾವೇಶದಲ್ಲಿ ಪದಾಧಿಕಾರಿಗಳನ್ನು ಭಾಗವಹಿಸದಂತೆ ವಸಂತ ಅವರು ಹೇಳಿದ್ದರು. ನಾನು ಬಿಜೆಪಿಯಲ್ಲಿದ್ದರೂ ಯಾವುದೇ ಪದಾಧಿಕಾರಿಯಾಗಿಲ್ಲ. ಅವರು ಕಾಂಗ್ರೆಸ್ ಎಸ್ಸಿ ಘಟಕದ ಕಾರ್ಯದರ್ಶಿಯಾಗಿದ್ದಾರೆ ಎಂದು ಹೇಳಿದರು.
ಹೇಳಿದಂತೆ ಕೇಳಿಕೊಂಡು ಹಿಂಬಾಲಕರಾಗಿರಬೇಕು ಎನ್ನುವ ಧೋರಣೆ ವಸಂತ ಅವರಲ್ಲಿದ್ದು, ಅದು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ಇಲ್ಲ ಸಲ್ಲದ ಆರೋಪ ಮಾಡಿ ಸಮಾಜದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನಮಗೆ ನೇಮಕಾತಿ ಆದೇಶ ನೀಡಿದ್ದು ಮಹಾಸಭಾ ಅಧ್ಯಕ್ಷರು, ಹುದ್ದೆಯಿಂದ ಪದಚ್ಯುತಿಗೊಳಿಸುವ ಅಧಿಕಾರ ಅವರಿಗಿದೆ ಎಂದು ಕೆ.ನಾಗಲಿಂಗಸ್ವಾಮಿ ಹೇಳಿದರು. ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಂಚಾಲ, ಪದಾಧಿಕಾರಿಗಳಾದ ಹನುಮಂತಪ್ಪ, ರಾಮಕೃಷ್ಣ ಇತರರಿದ್ದರು.