ಖರ್ಗೆ ವಿರುದ್ಧ ಛಲವಾದಿಗೆ ಮಾತನಾಡುವ ಯೋಗ್ಯತೆ ಇಲ್ಲ

New Abbayya
Published on

ಹುಬ್ಬಳ್ಳಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬಸ್ಥರ ವಿರುದ್ದ ಮಾತನಾಡುವ ಯೋಗ್ಯತೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಇಲ್ಲ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಏರೋಸ್ಪೇಸ್ ಪಾರ್ಕ್​ನಲ್ಲಿ 5 ಎಕರೆ ನಾಗರಿಕ ಸೌಕರ್ಯಗಳ ನಿವೇಶನವನ್ನು ಕೆಐಎಡಿಬಿ ವತಿಯಿಂದ ಸಿದ್ದಾರ್ಥ ವಿಹಾರ ಟ್ರಸ್ಟ್​ಗೆ ಮಂಜೂರು ಮಾಡಿರುವುದು ಕಾನೂನು ಹಾಗೂ ನಿಯಮದ ಪ್ರಕಾರ ಇದೆ. ಆದರೂ ರಾಜ್ಯಪಾಲರಿಗೆ ದೂರು ನೀಡಿ, ಅವರಿಂದ ವಿವರಣೆ ಕೇಳಲಾಗಿದೆ ಎಂದು ದೂರಿದ್ದಾರೆ.

ಖರ್ಗೆ ಕುಟುಂಬ ತಪ್ಪು ಮಾಡಿದೆ ಎಂದು ಜನರಲ್ಲಿ ತಪು್ಪ ಭಾವನೆ ಮೂಡುವಂತೆ ಬಿಂಬಿಸಲು ಪ್ರಯತ್ನ ಪಡಲಾಗುತ್ತಿದೆ. ಬಿಜೆಪಿ ಮುಖಂಡರ ಕುತಂತ್ರ ಫಲಿಸದು ಎಂದು ಅಬ್ಬಯ್ಯ ಹೇಳಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ನಮ್ಮ ಛಲವಾದಿ ಸಮುದಾಯಕ್ಕೆ ಶಾಪ. ಖರ್ಗೆ ಅವರು ನಮ್ಮ ಸಮುದಾಯದ ಆಲದ ಮರ ಎಂಬುದನ್ನು ಮರೆಯಬಾರದು. ನಾರಾಯಣಸ್ವಾಮಿ ಯಾರಿಂದ ಬೆಳೆದಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.

ನಾರಾಯಣಸ್ವಾಮಿ ಅವರು 2006 ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡು 18 ವರ್ಷಗಳಾದರೂ ಅಲ್ಲಿ ಏನು ಮಾಡದೆ ಶೆಡ್ಡ ಹಾಕಿಕೊಂಡು ಕುತಿರುವ ಆಸಾಮಿ. ನಾರಾಯಣಸ್ವಾಮಿ ಅವರೇನೂ ಸತ್ಯ ಹರಿಶ್ಚಂದ್ರ ಅಲ್ಲ ಎಂದು ಅಬ್ಬಯ್ಯ ಕಿಡಿಕಾರಿದ್ದಾರೆ.

ರಾಜ್ಯಪಾಲರು ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡಿದ ಕ್ಷಣದಲ್ಲಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದರ ಹಿಂದೆ ಕೇಂದ್ರ ಬಿಜೆಪಿಯ ಕೈವಾಡ ಇದೆ ಎಂಬುದು ಮತ್ತೆ ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್ ಹಾಗೂ ಬಿಜೆಪಿ ನಾಯಕರ ವಿರುದ್ದ ಪ್ರಾಸಿಕ್ಯೂಷನ್​ಗೆ ಅನುಮತಿ ಇನ್ನೂ ಕೊಡುತ್ತಿಲ್ಲ. ಇವರ ದ್ವಿಮುಖ ನೀತಿ ಜನರಿಗೆ ಅರ್ಥವಾಗುತ್ತಿದೆ. ರಾಜ್ಯಪಾಲರನ್ನು ರಾಷ್ಟ್ರಪತಿಗಳು ವಾಪಾಸ್ಸು ಕರೆಯಿಸಿಕೊಳ್ಳಬೇಕು ಎಂದು ಶಾಸಕ ಪ್ರಸಾದ ಅಬ್ಬಯ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net