ಅಂಬೇಡ್ಕರ್​ಗೆ ಕಾಂಗ್ರೆಸ್ ಸಿಂಹಾಸನ ಕೊಟ್ಟಿತ್ತೆ?

9 ckm 11
Published on

ಚಿಕ್ಕಮಗಳೂರು: ಡಾ. ಅಂಬೇಡ್ಕರ್ ಅವರ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರೂ ಸಹಿಸುವುದಿಲ್ಲ. ಬಿಜೆಪಿಯನ್ನು ಡಾ. ಅಂಬೇಡ್ಕರ್ ವಿರೋಧಿ ಎನ್ನುವ ಕಾಂಗ್ರೆಸ್ ಮುಖಂಡರು ಅಂಬೇಡ್ಕರ್ ಅವರನ್ನು ಸಿಂಹಾಸನದ ಮೇಲೆ ಕೂರಿಸಿದ್ದರೆ? ಅವರ ಮೇಧಾವಿತನ ಗುರುತಿಸಿದ್ದರೆ? ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

ದೆಹಲಿಯಲ್ಲಿ ಮಹಾತ್ಮ ಗಾಂಧಿ ಅವರ ಸಮಾಧಿಗೆ 50 ಎಕರೆ ಜಾಗ ಮೀಸಲಿಟ್ಟರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಸಮಾಧಿಗೂ ಜಾಗ ಒದಗಿಸಿದರು. ಆದರೆ ಇಡೀ ಪ್ರಪಂಚವೇ ಕೊಂಡಾಡುವ ಅಂಬೇಡ್ಕರ್ ಅವರ ಸಮಾಧಿಗೆ ಜಾಗ ನೀಡಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ದೂರಿದರು.

ಅಂಬೇಡ್ಕರ್ ಅವರು ಚುನಾವಣೆಗೆ ಸ್ಪರ್ಧಿಸಿದಾಗ ಕಾಂಗ್ರೆಸಿಗರು ಸೋಲಿಸುವ ಕುತಂತ್ರ ಹೆಣೆದರು. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಸುಡುವ ಮನೆ. ದಲಿತರಿಗೆ ಅಲ್ಲಿ ಭವಿಷ್ಯವಿಲ್ಲ. ಅಲ್ಲಿಗೆ ಹೋಗಬೇಡಿ. ಹೋದರೆ ಅದನ್ನು ಆತ್ಮಹತ್ಯೆ ಎಂದೇ ತಿಳಿಯಿರಿ ಎಂದು ಅಂಬೇಡ್ಕರ್ ಹೇಳಿದ್ದರು. ನಾನೂ ಸೇರಿದಂತೆ ಕಾಂಗ್ರೆಸ್​ನಲ್ಲಿದ್ದ ಅನೇಕರಿಗೆ ಅವರ ಮಾತು ಅರ್ಥವಾದ ಬಳಿಕ ಅಲ್ಲಿಂದ ಹೊರಬಂದೆವು ಎಂದರು.

ಬಿಜೆಪಿ ಸಂವಿಧಾನವನ್ನು ತೆಗೆದೇಬಿಡುತ್ತದೆ ಎಂದು ಕಾಂಗ್ರೆಸ್ ವರಿಷ್ಠರು ಆರೋಪಿಸುತ್ತಾರೆ. ಆದರೆ ನನ್ನಂತಹ ಒಬ್ಬ ವ್ಯಕ್ತಿ ಪ್ರಧಾನಿಯಾಗಲು ನಮ್ಮ ಸಂವಿಧಾನವೇ ಕಾರಣ ಎಂದು ನರೇಂದ್ರ ಮೋದಿ ಹೇಳಿದ್ದಾರೆ. 60 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್​ನ ಯಾವುದೇ ಪ್ರಧಾನಿ ಈ ರೀತಿ ಹೇಳಿರುವ ಬಗ್ಗೆ ದಾಖಲೆ ಇದ್ದರೆ ತಿಳಿಸಿ ಎಂದು ಸವಾಲು ಹಾಕಿದರು.

ಬಿಜೆಪಿ ಡಾ. ಅಂಬೇಡ್ಕರ್ ವಿರೋಧಿಯಾಗಿದ್ದು, ಮೀಸಲಾತಿ ತೆಗೆಯುತ್ತದೆ. ಸಂವಿಧಾನವನ್ನೇ ತೆಗೆದುಹಾಕುತ್ತದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಆದರೆ ಬಿಜೆಪಿ ಸಂಪೂರ್ಣ ಬಹುಮತ ಪಡೆದು ಅಧಿಕಾರ ಹಿಡಿದಿದ್ದರೂ ಯಾವುದೇ ಕಾರಣಕ್ಕೂ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ತಿಳಿಸಿದರು.

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಡಾ. ಅಂಬೇಡ್ಕರ್ ಜೀವನ ಚರಿತ್ರೆ ಆಧರಿಸಿದ ಧಾರಾವಾಹಿಯಲ್ಲಿ ಕಾಂಗ್ರೆಸಿಗರು ಅಂಬೇಡ್ಕರ್ ಅವರನ್ನು ಹೇಗೆ ನಡೆಸಿಕೊಂಡರೆಂಬುದು ಮುಂದೆ ಬಹಿರಂಗವಾಗಲಿದೆ. ಇದಕ್ಕಾಗಿ ಕಾರ್ಯಕ್ರಮ ತಡೆಯಬೇಕೆನ್ನುವ ಸಂಚು ಕಾಂಗ್ರೆಸನದು. ಆದರೆ ಬಿಜೆಪಿ ವಿರುದ್ಧ ವೃಥಾ ಆರೋಪ ಹೊರಿಸುತ್ತಿದೆ ಎಂದರು.

ಉಪ್ಪು ನೀರಿನ ಬಾವಿ ಕಾಂಗ್ರೆಸ್: ಎರಡು ಬಾವಿ ಇತ್ತು. ಒಂದು ಸಿಹಿ ನೀರಿನದು. ಇನ್ನೊಂದು ಉಪ್ಪು ನೀರಿನದು. ಸಿಹಿನೀರಿನ ಬಾವಿ ಬಿಜೆಪಿಯಾದರೆ, ಉಪ್ಪು ನೀರಿನ ಬಾವಿ ಕಾಂಗ್ರೆಸ್. ಕಾಂಗ್ರೆಸಿಗರು ಸಿಹಿನೀರಿನ ಬಾವಿಯತ್ತ ಹೊರಳಿದರೆ ಅಲ್ಲಿ ಹೋಗಬೇಡಿ. ಭೂತ ಇದೆ. ಅದು ನಿಮ್ಮನ್ನು ಸಾಯಿಸುತ್ತದೆ. ಹಾಗೆಯೇ ಇಲ್ಲಿರುವ ಉಪ್ಪು ನೀರನ್ನೇ ಕುಡಿಯಿರಿ ಎಂದು ಒತ್ತಾಯಿಸುತ್ತಿದ್ದರು. ಆದರೀಗ ದಲಿತರು ಒಗ್ಗಟ್ಟಿನಿಂದ ಸಿಹಿನೀರಿನ ಸಂಗ್ರಹಕ್ಕೆ ಒಮ್ಮೆಲೇ ಬಿಜೆಪಿಯತ್ತ ಬಂದ ಬಳಿಕ ಕಾಂಗ್ರೆಸ್ ಎಂಬ ಭೂತ ಅಲ್ಲಿಂದ ನಾಪತ್ತೆಯಾಗಿದೆ. ಇದು ಛಲವಾದಿ ನಾರಾಯಣ ಸ್ವಾಮಿ ಅವರ ವಿಶ್ಲೇಷಣೆ. ದೇಶಾದ್ಯಂತ ಬಿಜೆಪಿಯತ್ತ ದಲಿತರ ಒಲವು ಇರುವುದನ್ನು ಸಹಿಸಲಾಗದೆ ಕಾಂಗ್ರೆಸ್ ಎಂಬ ಭೂತ ಒದ್ದಾಡಿ ಸಾಯುತ್ತಿದೆ ಎಂದು ಲೇವಡಿ ಮಾಡಿದರು. ಬಿಜೆಪಿ ದಲಿತ ವಿರೋಧಿ ಎನ್ನುವವರಿಗೆ ಬಿಜೆಪಿಯ ಒಳಗೆ ಏನಾಗುತ್ತಿದೆ ಎನ್ನುವುದೇ ಗೊತ್ತಿಲ್ಲ ಎಂದು ಟೀಕಿಸಿದರು.

ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ರಾಜ್ಯ ಬಿಜೆಪಿ ಎಸ್​ಟಿ ಮೋರ್ಚಾ ಉಪಾಧ್ಯಕ್ಷರಾದ ಬಸವರಾಜ್ ನಾಯಕ್, ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಮುಖಂಡರಾದ ದೀಪಕ್ ದೊಡ್ಡಯ್ಯ, ಹಾಸನ ಜಿಲ್ಲಾ ಎಸ್​ಟಿ ಮೋರ್ಚಾ ಅಧ್ಯಕ್ಷ ನಾರಾಯಣ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net