ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಳ ಮೀಸಲಾತಿ ವರದಿಗೆ ಛಲವಾದಿ ಮಹಾಸಭಾ ವಿರೋಧ, ಸರ್ಕಾರಕ್ಕೆ ಎಚ್ಚರಿಕೆ

IMG_20250815_230245.jpg
Published on

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಒಳ ಮೀಸಲಾತಿ ಸಮೀಕ್ಷಾ ಕೈಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ವರದಿಯು ಎಡ ಹಾಗೂ ಬಲಗೈ ಎರಡೂ ಸಮುದಾಯಗಳಿಗೆ ಅನ್ಯಾಯವೆಸಗುವುದಕ್ಕೆ ಪೂರಕವಾಗಿದೆ ಎಂದು ರಾಜ್ಯ ಛಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ವೆಂಕಟ್ರೋಣಪ್ಪ‌ ಆರೋಪಿಸಿದ್ದಾರೆ.
ಈಗಾಗಲೇ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇದರ ಬಗ್ಗೆ ಸಚಿವ ಸಂಪುಟದಲ್ಲಿ ಆತುರಾತುರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಬಾರದು. ಒಂದು ವೇಳೆ ಒತ್ತಡಕ್ಕೆ ಮಣಿದು ಸಮುದಾಯಗಳಿಗೆ ಅನ್ಯಾಯವೆಸಗಿದ್ದಲ್ಲಿ ಸಂಬಂಧಪಟ್ಟ ಪರಿಶಿಷ್ಟ ಜಾತಿಯ ಸಚಿವರು, ೩೬ ಶಾಸಕರುಗಳಿಗೆ ಘೇರಾವ್‌ ಹಾಕಲಾಗುತ್ತದೆ ಎಂದು ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಬುಧವಾರ ಎಚ್ಚರಿಕೆ ನೀಡಿದರು.
ಕಳೆದ ೩೦ ವರ್ಷಗಳಿಂದಲೂ ಒಳ ಮೀಸಲಾತಿಗಾಗಿ ನಿರಂತರವಾಗಿ ಹೋರಾಟವನ್ನು ನಡೆಸಲಾಗಿದೆ. ಇದರ ಫಲವಾಗಿ ಸಮೀಕ್ಷಾ ವರದಿ ಸ್ವೀಕಾರ ಹಂತದ ಪ್ರಕ್ರಿಯೆ ನಡೆದಿದೆ. ಆದರೆ, ಇದರಲ್ಲಿ ಹಲವು ಲೋಪಗಳಿವೆ. ಇದನ್ನು ಸರಿಪಡಿಸದಿದ್ದಲ್ಲಿ ಹಲವು ಸಮುದಾಯಗಳು ಮತ್ತೆ ಅನ್ಯಾಯಕ್ಕೊಳಗಬೇಕಾಗುತ್ತದೆ ಎಂದು ಆರೋಪಿಸಿದರು.
ನಾಗಮೋಹನ್‌ ದಾಸ್‌ ವರದಿಯಲ್ಲಿನ ಜಾತಿಗಳ ವರ್ಗೀಕರಣ ಸೇರಿದಂತೆ ಇತರ ದತ್ತಾಂಶಗಳು ಸರಿ ಇಲ್ಲ. ಸಮುದಾಯವನ್ನು ೫ ವಲಯಗಳನ್ನು ವಿಂಗಡಿಸಿ, ಮೀಸಲಾತಿ ಪ್ರಮಾಣವನ್ನು ಕಡಿಮೆ ತೋರಿಸಿದ್ದಾರೆ. ಇದನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವರಾದ ಜಿ.ಪರಮೇಶ್ವರ್‌, ಎಚ್‌.ಸಿ.ಮಹದೇವಪ್ಪ, ಕೆ.ಎಚ್‌.ಮುನಿಯಪ್ಪ, ಪ್ರಿಯಾಂಕ್‌ ಖರ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ತ್ಯಾಗರಾಜ್‌ ಮಾತನಾಡಿ, ಶೋಷಿತ ವರ್ಗವು ಅನ್ಯಾಯ, ತುಳಿತಕ್ಕೊಳಗಾಗುವುದನ್ನು ತಪ್ಪಿಸಲು ನಿರಂತರವಾಗಿ ಒಳ ಮೀಸಲಾತಿ ಹೋರಾಟವನ್ನು ನಡೆಸಲಾಗಿದೆ. ಈಗಲೂ ಅನ್ಯಾಯವಾದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳ ನಾಯಕರೊಂದಿಗೆ ಚರ್ಚಿಸಿ, ನ್ಯಾಯ ಸಮ್ಮತ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವೆಂಕಟ್‌, ಕೈವಾರದ ಮಂಜುನಾಥ್, ಬಾಗೇಪಲ್ಲಿ ರಮೇಶ್‌, ನಾರಾಯಣಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net