

ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ತಮ್ಮಿಬ್ಬರೂ ಚಾಲಕರಿಗೆ ವಿಶ್ರಾಂತಿ ನೀಡಿ ಖುದ್ದು ಕಾರು ಚಲಾಯಿಸಿಕೊಂಡು ವಿಧಾನಸಭೆ ಕ್ಷೇತ್ರ ಸುತ್ತಿ ಕರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ!
ಪ್ರತಿ ದಿನ ಬೆಳಗ್ಗೆ ಏಳಕ್ಕೆ ಮನೆ ಬಿಟ್ಟು ಸಂಜೆ ನಾಲ್ಕರವರೆಗೆ ಕ್ಷೇತ್ರ ಪ್ರದಕ್ಷಿಣೆ ಹಾಕುವ ಶಾಸಕರು ಜನರು ವಹಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಪಾಠ ಮಾಡುವ ಜತೆಗೆ ಅವರಿಗೆ ಸೌಲಭ್ಯ ತಲುಪಿಸುತ್ತಿದ್ದಾರೆ.
ತಾಲೂಕು ಮಟ್ಟದ ಸಭೆ ಜತೆಗೆ 26 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸಭೆ ನಡೆಸಿ ಸ್ವಚ್ಛತೆ, ಕುಡಿವ ನೀರು, ಪಡಿತರ, ಹಾಲು ವಿತರಣೆಗೆ ಸಮಸ್ಯೆ ಆಗದಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕ್ಷೇತ್ರ ಸುತ್ತಾಟ ವೇಳೆ ಅಲ್ಲಲ್ಲಿ ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಜತೆ ಸಭೆ ನಡೆಸಿ ಕರೊನಾ ತಡೆಗೆ ಕೈಗೊಂಡ ಕ್ರಮಗಳ ಪರಿಶೀಲನೆ ಹಾಗೂ ಜನರಿಂದ ಅಹವಾಲು ಸ್ವೀಕಾರ ಮಾಡುತ್ತಿದ್ದಾರೆ.
ಲಾಕ್‌ಡೌನ್ ನಿಯಮ ಪಾಲಿಸಿ, ಪೊಲೀಸ್, ರೋಗ್ಯ ಇಲಾಖೆ ಸಲಹೆ ನಿರ್ಲಕ್ಷಿಸದೆ ಸಹಕಾರ ನೀಡಿ ಎಂದು ತಿಳಿಹೇಳುವ ಜತೆಗೆ ಅಗತ್ಯವುಳ್ಳವರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸುತ್ತಿದ್ದಾರೆ.
ಹೋದ ಕಡೆಯಲ್ಲೆಲ್ಲ ಹಾಗೂ ಸಭೆ ನಡೆಸುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಲಾಗುತ್ತಿದೆ ಎನ್ನುತ್ತಾರೆ ಶಾಸಕರು.
ಸೌಲಭ್ಯ ಕಲ್ಪಿಸಲು ತಾಕೀತು: ದಿನಸಿ ವಸ್ತುಗಳ ಖರೀದಿ, ಅಗತ್ಯ ಸೇವೆಗಳಿಗೆ ಓಡಾಡುವ ಜನರಿಗೆ ತೊಂದರೆ ನೀಡಬೇಡಿ ಎಂದು ತಾಲೂಕು ಆಡಳಿತಕ್ಕೆ ಸೂಚಿಸಿದ್ದಾರೆ. ಸಂಕಷ್ಟದ ಸ್ಥಿತಿಯಲ್ಲಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕು. ಕುಡಿವ ನೀರು, ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಬೆಳೆಹಾನಿ ಕುರಿತಂತೆ ಜಿಪಿಎಸ್ ಫೋಟೋ ದಾಖಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಸಾಮಾಜಿಕ ಪಿಂಚಣಿ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ತಾಕೀತು ಮಾಡಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ದುಡಿವ ಕೈಗಳಿಗೆ ಕೆಲಸ ಕೊಡಿಸಿದ್ದಾರೆ.
ಶಾಸಕರ ಭವನದಲ್ಲಿ ನಿತ್ಯ ದಾಸೋಹ: ಹಳ್ಳಿಗರು, ನಿರಾಶ್ರಿತರು ಹಸಿವಿನಿಂದ ಬಳಲಬಾರದೆಂದು ಚಳ್ಳಕೆರೆಯ ಶಾಸಕರ ಭವನದಲ್ಲಿ ನಿರಂತರ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಬೆಳಗ್ಗೆ 11 ರಿಂದ ಸಂಜೆ 4ರ ವರೆಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಸುಮಾರು 500 ಜನರು ಊಟ ಮಾಡುತ್ತಿದ್ದಾರೆ.