

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಜನಪದ ಕಲಾಬಳಗ ಟ್ರಸ್ಟ್ನಿಂದ ಜು. 6ರಂದು ಮಧ್ಯಾಹ್ನ 4 ಗಂಟೆಗೆ ಚಕ್ರವ್ಯೂಹ-ಮಕ್ಕಳ ದೊಡ್ಡಾಟ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ದೊಡ್ಡಾಟ ಕಲಾವಿದ, ನಿರ್ದೇಶಕ ರಮೇಶ ಕರಬಸಮ್ಮನವರ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3 ಮತ್ತು 4ನೇ ತರಗತಿಯ 20 ಮಕ್ಕಳು ಕುಮಾರವ್ಯಾಸ ಮಹಾಭಾರತ ಆಧಾರಿತ ಚಕ್ರವ್ಯೂಹ ಪ್ರಸಂಗದ ಪ್ರದರ್ಶನ ನೀಡುವರು. ಈ ಮಕ್ಕಳಿಗೆ ಕಳೆದ 6 ತಿಂಗಳಿಂದ ಶಾಲಾ ಅವಧಿಯ ಬಳಿಕ ತರಬೇತಿ ನೀಡಲಾಗಿದೆ. ದೊಡ್ಡಾಟವು ವಿವಿಧ ವಿಧದ 20 ನೃತ್ಯಗಳನ್ನು ಒಳಗೊಂಡಿದೆ ಎಂದರು.
ಕಲಾ ಬಳಗ ಟ್ರಸ್ಟ್ ಇಲ್ಲಿಯವರೆಗೆ 10ಕ್ಕೂ ಹೆಚ್ಚು ದೊಡ್ಡಾಟ ಪ್ರದರ್ಶನಗಳನ್ನು ನೀಡಿದೆ. ಇದೇ ಮೊದಲ ಬಾರಿ ಮಕ್ಕಳಿಂದ ದೊಡ್ಡಾಟ ಪ್ರದರ್ಶನ ಏರ್ಪಡಿಸಲಾಗಿದೆ. ನನ್ನ ನಿರ್ದೇಶನದಲ್ಲಿ ಮಕ್ಕಳು ಪ್ರದರ್ಶನ ನೀಡುವರು ಎಂದರು.
ಹಿರಿಯ ಕಾರ್ವಿುಕ ಮುಖಂಡ ಡಾ. ಕೆ.ಎಸ್.ಶರ್ವ ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ, ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ, ಕಾರ್ಯದರ್ಶಿ ರಮೇಶ ಕರಬಸಮ್ಮನವರ, ಸದಾಶಿವ ಚೌಶೆಟ್ಟಿ, ಡಾ. ರವೀಂದ್ರ, ಶಿವರುದ್ರಪ್ಪ ಬಡಿಗೇರ ಇದ್ದರು.