

ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ್ ಬರೆದ ಸಂವಿಧಾನ ಕಂಡರೆ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ ನೆಹರು ಅವರಿಗೇ ಆಗುತ್ತಿರಲಿಲ್ಲ, ಅಷ್ಟೇ ಏಕೆ ನೆಹರುಗೆ ಪತ್ರಿಕೆಗಳನ್ನು ಕಂಡರೆ, ನ್ಯಾಯಾಂಗ ವ್ಯವಸ್ಥೆ ಕಂಡರೆ ಆಗುತ್ತಿರಲಿಲ್ಲ. ಈ ದೇಶದ ಸಂವಿಧಾನವನ್ನು ಅತೀ ಹೆಚ್ಚು ತಿದ್ದುಪಡಿ ಮಾಡಿದ್ದೇ ನೇಹರು ಮನೆತನ ಎಂದು ಸಾಮಾಜಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.
ನಗರದ ಆಶ್ರಮ ರಸ್ತೆಯಲ್ಲಿರುವ ಸಾಯಿ ವಿಹಾರ ಮಂಗಲ ಕಾರ್ಯಾಲಯದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆಯಿಂದ ಸೋಮವಾರ ಆಯೋಜಿಸಿದ್ದ ‘1975ರ ತುರ್ತುಪರಿಸ್ಥಿತಿಯ 50ನೇ ವರ್ಷ’ದ ಕರಾಳ ದಿನಗಳ ಕುರಿತ ಚರ್ಚಾಕೂಟವನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸುಳ್ಳರ ಪಾರ್ಟಿ ಎಂದು ಜರಿದ ಸೂಲಿಬೆಲೆ, ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದವರು ನಾವು ಎಂದಿದ್ದು ಕಾಂಗ್ರೆಸ್‌ನ ಮೊದಲ ಸುಳ್ಳು. ಕಾಂಗ್ರೆಸ್‌ನ ಶಾಂತಿ-ಅಹಿಂಸೆಯಿಂದ ಸ್ವಾತಂತ್ರೃ ಸಿಕ್ಕಿದ್ದೇಯಾದರೆ ತ್ಯಾಗ-ಬಲಿದಾನಗಳಿಗೇನು ಬೆಲೆ? ಕ್ವಿಟ್ ಇಂಡಿಯಾ ಚಳುವಳಿ ನಡೆಸಿದ ಮಹಾತ್ಮ ಗಾಂಧಿಯೇ ಕೊನೆಗೆ ಮಾಡು ಇಲ್ಲವೇ ಮಡಿ ಎಂದು ಕರೆಕೊಟ್ಟರು. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್‌ನಿಂದ ಸ್ವಾತಂತ್ರೃ ಸಿಗಲು ಹೇಗೆ ಸಾಧ್ಯ? ಅಸಲಿಗೆ ಎರಡನೇ ಮಹಾಯುದ್ಧದ ನಂತರ ನೇತಾಜಿ ಸುಭಾಷಚಂದ್ರ ಬೋಸ್‌ರು ಕಟ್ಟಿದ ಸೈನ್ಯದಿಂದಾಗಿ ಬ್ರಿಟಿಷರು ಪದರುಗುಟ್ಟಿ ತುರ್ತಾಗಿ ದೇಶ ಬಿಟ್ಟು ಹೋಗಬೇಕಾಯಿತು. ಹೀಗಾಗಿ ಅದರ ಕ್ರೆಡಿಟ್ ನೇತಾಜಿಗೆ ಸಿಗಬೇಕೆಂದರು.
ಎರಡನೇ ಸುಳ್ಳು ಎಂದರೆ ‘ಬಾಬಾಸಾಹೇಬರಿಗೆ ಸಂವಿಧಾನ ಬರೆಯಲು ಕೊಟ್ಟಿದ್ದೇ ಕಾಂಗ್ರೆಸ್’ ಎಂಬುದು. ಜವಾಹರಲಾಲ್ ನೆಹರು ಅವರೇ ಎಡ್ವರ್ ಜನ್ನೀನ್ ಎಂಬುವರ ಹೆಸರು ಪ್ರಸ್ತಾಪಿಸಿದ್ದರು. ಆದರೆ, ಗಾಂಧಿ ನಿರಾಕರಿಸಿ ಡಾ.ಅಂಬೇಡ್ಕರ್ ಅವರಿಗೆ ಜವಾಬ್ದಾರಿ ನೀಡಲು ತಾಕೀತು ಮಾಡಿದ್ದರಿಂದ ಅವರನ್ನು ನೇಮಿಸಲಾಯಿತು.
ಮೂರನೇ ಸುಳ್ಳು ‘ಕಾಂಗ್ರೆಸ್‌ನವರು ಸಂವಿಧಾನದ ರಕ್ಷಕರು’ ಎನ್ನುತ್ತಿರುವುದು. ವಾಸ್ತವದಲ್ಲಿ ಸಂವಿಧಾನವನ್ನು ಹಾಳು ಮಾಡಿದವರೇ ಕಾಂಗ್ರೆಸ್ ಎಂಬುದಕ್ಕೆ ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿಯೇ ಸಾಕ್ಷಿ ಎಂದರು.
ಸಂವಿಧಾನವನ್ನು ಹೆಚ್ಚು ತಿದ್ದುಪಡಿ ಮಾಡಿರೋದೇ ಕಾಂಗ್ರೆಸ್. ಒಟ್ಟು 106 ಬಾರಿ ತಿದ್ದುಪಡಿಯಾಗಿದ್ದು 75 ಬಾರಿ ತಿದ್ದು ಮಾಡಿದವರು ಕಾಂಗ್ರೆಸ್‌ನವರು. ಅಂದರೆ ಮುಕ್ಕಾಲು ಪಾಲು ತಿದ್ದುಪಡಿ ಕಾಂಗ್ರೆಸ್ ಅವಧಿಯಲ್ಲೇ ಆಗಿದೆ. ಗಾಂಧಿ ಕುಟುಂಬವೊಂದರ ಆಳ್ವಿಕೆಯಲ್ಲಿಯೇ 58 ತಿದ್ದುಪಡಿ ತರಲಾಗಿದೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ಸಂವಿಧಾಣ ತಿದ್ದುಪಡಿ ಆಗಬೇಕು ಎಂದವರೇ ಇಂದಿರಾಗಾಂಧಿ. ಬಾಬಾಸಾಹೇಬ ಅಂಬೇಡ್ಕರ್ ಜೀವಂತ ಇದ್ದಾಗಲೇ ನೆಹರು ಅವರು ‘ಸಂವಿಧಾನ ಕೊಲ್ಲಬೇಕೆಂದರೆ ಇರುವ ಒಂದೇ ಮಾರ್ಗವೆಂದರೆ ಅದನ್ನು ಪೂಜೆ ಮಾಡಿ, ಜೀವಂತ ಇಡಬೇಕಾದರೆ ಬದಲಾಯಿಸಿ’ ಎಂದಿದ್ದರು. ಆದರೆ ಪ್ರಧಾನಿ ಮೋದಿ ಅವರು ‘ಸ್ವತಃ ಬಾಬಾಸಾಹೇಬ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ’ ಎಂದರು.
ಸಂವಿಧಾನ ದೊಡ್ಡ ಗ್ರಂಥ, ರಾಹುಲ್ ಗಾಂಧಿ ಚಿಕ್ಕದಾದ ಕೆಂಪು ಪುಸ್ತಕ ಹಿಡಿದು ತಿರುಗುತ್ತಾರೆ. ಅದರಲ್ಲೇನಿದೆ ಅಂತ ಕೇಳಿದರೆ ಯಾರೋ ಹೇಳಿದರು ‘ಇಂದಿರಾಗಾಂಧಿ ಸಂವಿಧಾನ ಹೇಗೆ ಹಾಳು ಮಾಡಿದರೆಂಬ ಮಾಹಿತಿ ಇದೆ’ ಎಂದು ಲೇವಡಿ ಮಾಡಿದರು.
ಬಾಬಾಸಾಹೇಬರು ಪ್ರಸ್ತಾವನೆಯನ್ನು ಪ್ರೀತಿಸುತ್ತಿದ್ದರು. ಇಡೀ ಸಂವಿಧಾನದ ಆಶಯವನ್ನು ಪ್ರಸ್ತಾವನೆಯಲ್ಲಿ ಹಿಡಿದಿಟ್ಟಿದ್ದರು. ಆದರೆ ಕಾಂಗ್ರೆಸ್ 42ನೇ ತಿದ್ದುಪಡಿ ಮೂಲಕ ಆ ಪ್ರಸ್ತಾವನೆಯನ್ನೇ ತಿದ್ದಿತು. ತುರ್ತು ಪರಿಸ್ಥಿಯ ಸಂದರ್ಭ ಪ್ರಸ್ತಾವನೆಯಲ್ಲಿ ಜಾತ್ಯತೀತ ಮತ್ತು ಸಮಾಜವಾದ ಎಂಬ ಪದ ಸೇರಿಸಲಾಯಿತು. ಸದ್ಯ ನಾವೆಲ್ಲ ಓದುತ್ತಿರುವುದು ಅಂಬೇಡ್ಕರ್ ಬರೆದ ಸಂವಿಧಾನದ ಪ್ರಸ್ತಾವನೆಯಲ್ಲ; ಇಂದಿರಾ ಗಾಂಧಿ ಅವರ ಪ್ರಸ್ತಾವನೆ ಎಂದರು.
ಚುನಾವಣೆಯಲ್ಲಿ ಅಕ್ರಮ ಮಾಡುವುದು ಹೇಗೆಂದು ತೋರಿಸಿಕೊಟ್ಟಿದ್ದೇ ಕಾಂಗ್ರೆಸ್. 1975 ಜೂ.12 ಕ್ಕೆ ಅಲಹಾಬಾದ್ ಹೈಕೋರ್ಟ್ ತೀರ್ಪು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ತೀರ್ಪು ನೀಡಿದಾಗ ಇಂದಿರಾ ಗಾಂಧಿ ಹೈಕೋಟ್ ಮೆಟ್ಟಿಲೇರಿದ್ದರು. ಹೈಕೋಟ್ ಸಹ ಕೆಳ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿತ್ತು. ಅಲ್ಲದೇ ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲವೆಂದು ನಿಷೇಧ ಹೇರಿತು. ಪರಿಣಾಮ ಅದೇ ವರ್ಷ ಜೂ.25ರಂದು ತುರ್ತುಪರಿಸ್ಥಿತಿ ಹೇರಿದರು. ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ತಳ್ಳಲಾಯಿತು. ಸಾರ್ವಭೌಮ ರಾಷ್ಟ್ರ ಜೈಲಾಗಿ ಪರಿವರ್ತನೆಯಾಯಿತು. ಪತ್ರಿಕೆಗಳಿಗೆ ನಿಷೇಧ ಹೇರಲಾಯಿತು. ಬಲವಂತವಾಗಿ ಸಂತಾನ ಶಕ್ತಿ ಹರಣ ಮಾಡಲಾಯಿತು. ಒಂದೊಂದು ನಿರ್ಧಾರವೂ ಭೀಕರವಾಗಿತ್ತು. ಜಯಪ್ರಕಾಶ ನಾರಾಯಣ ನೇತೃತ್ವದಲ್ಲಿ ವ್ಯಾಪಕ ಆಂದೋಲನ ಸೃಷ್ಠಿಯಾದಾಗ ಮುಂದೆ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಕೂಬಿಟ್ಟು ಚುನಾವಣೆ ಎದುರಿಸಲಾಗಿ ಹೀನಾಯವಾಗಿ ಸೋಲಬೇಕಾಯಿತೆಂದು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಪ್ರಮುಖರಾದ ಮಹೇಂದ್ರ ಕೌತಾಳ ಮಾತನಾಡಿ, ತುರ್ತು ಪರಿಸ್ಥಿತಿ ಸಂವಿಧಾನ ಕೊಲೆ ಮಾಡಿದ ದಿನ. ಮಾತೆತ್ತಿದರೆ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸಂವಿಧಾನಕ್ಕೆ ಗೌರವ ಕೊಡಲೇ ಇಲ್ಲ. ಸಂವಿಧಾನ ಪಾಲಿಸಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಭಾರತ ಮಾತೆಯ ಸಿಂಧೂರ ಉಳಿಸುತ್ತಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮುಖಂಡರಾದ ಅರುಣ ಶಹಾಪುರ, ಉಮೇಶ ಕೋಳಕೂರ, ಸುರೇಶ ಬಿಜಾಪುರ, ರಾಘವ ಅಣ್ಣಿಗೇರಿ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ವಿಜಯ ಜೋಷಿ, ಈರಣ್ಣ ರಾವೂರ, ಭೀಮಾಶಂಕರ ಹದನೂರ ಮತ್ತಿತರರಿದ್ದರು.