

ಶಿರಸಿ: ಗಣೇಶ ಚೌತಿ ಸಮೀಪಿಸುತ್ತಿದಂತೆ ಎಲ್ಲೆಡೆ ಮುಂಚಿತವಾಗಿಯೇ ಚಕ್ಕುಲಿ ತಯಾರಿಕೆ ಕಾರ್ಯ ಶುರುವಾಗುತ್ತದೆ. ತಾಲೂಕಿನ ಹೆಗಡೆಕಟ್ಟಾ ಸೇರಿ ಸುತ್ತಲಿನ ಹಳ್ಳಿಗರೆಲ್ಲ ಸಹಕಾರಿ ಸಂಘದ ಆವರಣದಲ್ಲಿ ಕೈನಲ್ಲೇ ಸುತ್ತಿ ಚಕ್ಕುಲಿ ಸಿದ್ಧಪಡಿಸುತ್ತಿದ್ದಾರೆ.
ಹಿಟ್ಟು ತಯಾರಿಸಿ ಬಳಿಕ ಮಟ್ಟಿನಲ್ಲಿ ಹಾಕಿ ಚಕ್ಕುಲಿ ಸಿದ್ಧಪಡಿಸಲು, ಕಾದ ಎಣ್ಣೆಯಲ್ಲಿ ಬೇಯಿಸಲು ಹತ್ತಾರು ಜನರ ಅಗತ್ಯತೆ ಇದೆ. ಗಣೇಶ ಚೌತಿ ಬಳಿಕ ಮನೆಗೆ ಬಂದ ನೆಂಟರಿಷ್ಟರಿಗೆ ನೀಡಲು ಪ್ರತಿ ಮನೆಯಲ್ಲೂ ಹೆಚ್ಚಿನ ಪ್ರಮಾಣದ ಚಕ್ಕುಲಿ ಸಿದ್ಧಪಡಿಸಿಕೊಳ್ಳುತ್ತಾರೆ. ಹೀಗಾಗಿ, ಮಲೆನಾಡ ಹಳ್ಳಿಗಳಲ್ಲಿ ಗ್ರಾಮಸ್ಥರೆಲ್ಲ ಸೇರಿ ಪ್ರತಿ ದಿನವೂ ಒಂದೊಂದು ಮನೆಯಲ್ಲಿ ಚಕ್ಕುಲಿ ಕಂಬಳ ಆಚರಿಸುವ ಪದ್ಧತಿ ಇದೆ.
ತಾಲೂಕಿನ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘವು ಸುತ್ತಮುತ್ತಲಿನ ಗ್ರಾಮಸ್ಥರನ್ನೆಲ್ಲ ಒಗ್ಗೂಡಿಸಿ, ಸಂಘದ ಆವರಣದಲ್ಲಿ ಚಕ್ಕುಲಿ ತಯಾರಿಸುವ ಕಾರ್ಯ ನಡೆಸುತ್ತದೆ. ಶನಿವಾರದಿಂದ ಈ ಕಾರ್ಯ ಆರಂಭಗೊಂಡಿದ್ದು, ಸತತ 15 ದಿನ ಚಕ್ಕುಲಿ ಕಂಬಳ ನಡೆಯಲಿದೆ. ಹೆಗಡೆಕಟ್ಟಾ ಸುತ್ತಲಿನ ಗ್ರಾಮಗಳಾದ ಹೆಗಡೆಕಟ್ಟಾ, ಹೆಗ್ಗಾರು, ಕಲ್ಮನೆ, ಬಾಳೆಗದ್ದೆ ಸೇರಿ 10ಕ್ಕೂ ಅಧಿಕ ಹಳ್ಳಿಗಳ ಜನತೆ ತಮ್ಮ ಮನೆಯ ಚಕ್ಕುಲಿ ಕಂಬಳವನ್ನು ಸಂಘದ ಆವರಣದಲ್ಲಿಯೇ ನಡೆಸಿಕೊಳ್ಳುತ್ತಿದ್ದಾರೆ. ಪರಸ್ಪರ ಸಹಕಾರ ಭಾವ, ಅಪರೂಪದ ಕೈ ಚಕ್ಕುಲಿ ತಯಾರಿಕೆ ವಿಧಾನಗಳು ಇತರರಿಗೂ ಕರಗತವಾಗಲಿ ಎಂಬ ಉದ್ದೇಶದಿಂದ ಪ್ರತಿ ದಿನವೂ ಸಂಘದ ಆವರಣಕ್ಕೆ ಈ ಭಾಗದ ಸಾರ್ವಜನಿಕರು ಬಂದು ಚಕ್ಕುಲಿ ಕಂಬಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪಾಲ್ಗೊಳ್ಳುವವರಿಗಾಗಿ ಚಕ್ಕುಲಿ ಸುತ್ತುವ ಸ್ಪರ್ಧೆ ಹಾಗೂ ತಿನ್ನುವ ಸ್ಪರ್ಧೆ ಆಯೋಜಿಸಲಾಗುತ್ತಿದೆ. ತಾಜಾ ಚಕ್ಕುಲಿ ಖರೀದಿಗೂ ಅವಕಾಶ ನೀಡಲಾಗಿದೆ. ಕೈ ಕಂಬಳದಲ್ಲಿ ವಿವಿಧ ವಿನ್ಯಾಸದ ಚಕ್ಕುಲಿಗಳನ್ನೂ ತಯಾರಿಸುತ್ತಾರೆ.
ಕೈ ಚಕ್ಕುಲಿಯ ವಿಶೇಷ
ಚಕ್ಕುಲಿ ತಯಾರಿಕೆಗೆ ಇತ್ತೀಚಿನ ವರ್ಷಗಳಲ್ಲಿ ಮಟ್ಟುಗಳನ್ನು ಬಳಸಲಾಗುತ್ತಿದೆ. ಆದರೆ, ಮಲೆನಾಡಿನ ಅನೇಕ ಹಳ್ಳಿಗಳಲ್ಲಿ ಮಟ್ಟುಗಳಿಲ್ಲದೇ ಕೈನಿಂದಲೇ ಚಕ್ಕುಲಿ ಸುತ್ತುವ ಪದ್ಧತಿ ಇದೆ. ಹೆಗಡೆಕಟ್ಟಾ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಈ ಪದ್ಧತಿ ಇನ್ನೂ ಉಳಿದುಕೊಂಡಿದೆ. ಈ ರೀತಿ ಕೈನಲ್ಲಿ ಸುತ್ತಿ ಸಿದ್ಧಪಡಿಸಿದ ಚಕ್ಕುಲಿ ರುಚಿಯೂ ಜಾಸ್ತಿ. ತೆಂಗಿನ ಎಣ್ಣೆಯಲ್ಲಿ ಚಕ್ಕುಲಿ ಬೇಯಿಸಿದರೆ ಮೂರು ತಿಂಗಳ ಕಾಲ ಕೆಡದಂತೆ ಇಡಬಹುದಾಗಿದೆ ಎನ್ನುತ್ತಾರೆ ಹಿರಿಯರು. ಸ್ಥಳೀಯ ಜಾತಿಯ ಭತ್ತಗಳಾದ ಹೆಗ್ಗೆ, ಮಟ್ಟಣಗಾ, ಪದ್ಮರೇಖಾ ಇನ್ನಿತರ ಅಕ್ಕಿಗಳನ್ನು ಚಕ್ಕುಲಿ ತಯಾರಿಕೆಗೆ ಬಳಸಿದರೆ ರುಚಿ ಇನ್ನೂ ಹೆಚ್ಚು.
ಕೈ ಕಂಬಳದಲ್ಲಿ ವಿವಿಧ ವಿನ್ಯಾಸದ ಚಕ್ಕುಲಿಗಳನ್ನು ತಯಾರಿಸುತ್ತಾರೆ. ಪರಿಣತರು ಅಕ್ಷರಗಳನ್ನೂ ಬರೆಯುತ್ತಾರೆ. ಸುತ್ತಲಿನ ಎಲ್ಲ ಗ್ರಾಮಸ್ಥರು ಒಗ್ಗೂಡಿ ಚಕ್ಕುಲಿ ಕಂಬಳ ಮಾಡುತ್ತಿದ್ದೇವೆ. | ಎಂ.ಪಿ. ಹೆಗಡೆ ಹೊನ್ನೆಕಟ್ಟಾ, ಸಹಕಾರಿ ಸಂಘದ ಅಧ್ಯಕ್ಷ