

ನವಲಗುಂದ: ಕರೊನಾ 2ನೇ ಅಲೆ ಮುಂಜಾಗ್ರತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಕಟ್ಟುನಿಟ್ಟಾಗಿ ಪರಿಪಾಲನೆ ಮಾಡಿದ ಯಮನೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಐತಿಹಾಸಿಕ ಯಮನೂರು ಚಾಂಗದೇವನ ಜಾತ್ರೆಗೆ ಭಕ್ತಾದಿಗಳು ಬರದಿರುವಂತೆ ಸಂಪೂರ್ಣ ನಿರ್ಬಂಧ ಹಾಕಿದ್ದಾರೆ.
ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಮತ್ತು ನೆರೆ ಜಿಲ್ಲೆಗಳಾದ ರಾಯಚೂರು, ಬಳ್ಳಾರಿ, ಗದಗ ಸೇರಿ ವಿವಿಧೆಡೆಯಿಂದ ಬರುವ ಭಕ್ತರಿಗೆ ಗ್ರಾಪಂನ ಈ ಕ್ರಮ ನಿರಾಸೆ ಮೂಡಿಸಿದೆ. ಯಮನೂರು ಗ್ರಾಪಂ ಅಧಿಕಾರಿಗಳು ಪೊಲೀಸರ ಮೂಲಕ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಯಮನೂರಿಗೆ ಬರುವ ಮಾರ್ಗಗಳಿಗೆ ಮುಳ್ಳು ಕಂಟಿ ಮತ್ತು ಬ್ಯಾರಿಕೇಡ್ ಇಟ್ಟು ನಾಕಾಬಂದಿ ಮಾಡಿದ್ದಾರೆ. ಮಾರ್ಚ್ 31ರಿಂದ ಪ್ರಾರಂಭವಾಗಿರುವ ಜಾತ್ರೆ ಏಪ್ರಿಲ್ ತಿಂಗಳು ಪರ್ಯಂತ ಉರುಸು (ಜಾತ್ರೆ) ನಡೆಯಲಿದೆ. ಜಾತ್ರೆಗೆ ನಿರ್ಬಂಧವಿದ್ದರೂ, ದೂರದ ಊರುಗಳಿಂದ ಭಕ್ತರು ಆಗಮಿಸುತ್ತಿದ್ದರು. ಆಗ ಪೊಲೀಸರು ಅವರನ್ನು ವಾಪಸ್ ಕಳುಹಿಸುತ್ತಿದ್ದದ್ದು ಸಾಮಾನ್ಯವಾಗಿತ್ತು. ಆಗ ಭಕ್ತರು ಪಕ್ಕದ ಹೊಲಗಳಲ್ಲಿನ ಮರದ ಕೆಳಗೆ ಕುಳಿತು ಚಾಂಗದೇವರತ್ತ ಮುಖಮಾಡಿ ನೈವೇದ್ಯ ಸಲ್ಲಿಸಿ ಊಟ ಮಾಡಿದರು. ಹೊರಗಿನಿಂದ ವ್ಯಾಪಾರಿಗಳು ಬಂದಿರಲಿಲ್ಲ. ಸ್ಥಳೀಯರು ಮಾರಾಟಕ್ಕೆಂದು ಹೆಚ್ಚು ವಸ್ತು ಖರೀದಿಸಿ ತಂದಿದ್ದು ತೀವ್ರ ಹಾನಿ ಅನುಭವಿಸುವಂತಾಯಿತು.
ಹಿಂದಿನಂತಿಲ್ಲ
ಈ ಹಿಂದಿನ ವರ್ಷಗಳಲ್ಲಿ ಚಾಂಗದೇವನ ಮಕ್ತುಂ ಸಕ್ಕರೆ, ವಿವಿಧ ಬಗೆಯ ಬೆಳ್ಳಿಯ ಸಾಮಗ್ರಿ ಖರೀದಿಸಿ ದೇವರಿಗೆ ಅರ್ಪಿಸಿ ದರ್ಶನಾಶೀರ್ವಾದ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದರು. ಕೆಲವರು ಕುರಿ, ಮೇಕೆಗಳನ್ನು ಬಲಿಕೊಟ್ಟು ಬಾಡೂಟ ಸವಿಯುತ್ತಿದ್ದರು.
ತಿಂಗಳ ಪರ್ಯಂತ ಜಾತ್ರೆ ಸರಳ ಆಚರಣೆ
ಚಾಂಗದೇವನ ಜಾತ್ರೆ ನಿಮಿತ್ತ ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯದಂತೆ ದೇವಸ್ಥಾನದ ಪೂಜಾರಿಗಳು ಹಾಗೂ ಸ್ಥಳೀಯ ಕೆಲವರು ಬೆಣ್ಣಿಹಳ್ಳದಿಂದ ನೀರು ತಂದು ಚಾಂಗದೇವನ ಗದ್ದುಗೆಗೆ ಗಂಗಾಭಿಷೇಕ, ದೀಪ ಹಚ್ಚುವ ಕಾರ್ಯಕ್ರಮ ನೆರವೇರಿಸಿ ಜಾತ್ರೆಯನ್ನು ಸರಳವಾಗಿ ಆಚರಿಸುತ್ತಿದ್ದಾರೆ.