ಉತ್ತರ ಕನ್ನಡದಲ್ಲಿ ಕೈಗಾರಿಕೆ ಸ್ಥಾಪನೆಗೆ ಮನವಿ

chaitra-kotarkar-meets-hdk
Published on

ಕಾರವಾರ: ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ, ಜನರಿಗೆ ಉದ್ಯೋಗ ಕಲ್ಪಿಸುವಂತೆ ಜೆಡಿಎಸ್ ಉತ್ತರ ಕನ್ನಡ ಮುಖಂಡೆ ಚೈತ್ರಾ ಕೊಠಾರಕರ್ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
ಎಚ್‌ಡಿಕೆ ಅವರನ್ನು ಪತಿ ಚಂದ್ರಹಾಸ ಕೊಠಾರಕರ್ ಅವರ ಜತೆ ಭೇಟಿಯಾಗಿ ಮನವಿ ಸಲ್ಲಿಸಿದರು. ಮತ್ತು ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ಚರ್ಚಿಸಿದರು.
ಉತ್ತರ ಕನ್ನಡ ಭೌಗೋಳಿಕವಾಗಿಯೂ ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಹೇರಳವಾದ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ವಿಭಿನ್ನ ಭೌಗೋಳಿಕ ಲಕ್ಷಣಗಳನ್ನು ಒಳಗೊಂಡಿರುವ ಜಿಲ್ಲೆಯು ಸುಮಾರು 140 ಕಿ. ಮೀ. ಉದ್ದದ ಕರಾವಳಿ ತೀರವನ್ನು ಹೊಂದಿದೆ. ಆದರೆ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಯಿಂದ ನಮ್ಮ ಯುವಜನತೆ ಪರದಾಡುತ್ತಿದ್ದಾರೆ. ಉದ್ಯೋಗಕ್ಕಾಗಿ ಪರ ಜಿಲ್ಲೆ, ಪರ ರಾಜ್ಯಕ್ಕೆ ಅಲೆದಾಡುತ್ತಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೂ ಕೈಗಾರಿಕೆಗಳಿಲ್ಲದಿರುವುದರಿಂದ ಸಮಸ್ಯೆ ಜೀವಂತವಾಗಿದೆ.
ಉತ್ತರಕನ್ನಡ ಜಿಲ್ಲೆಯ ಅದರಲ್ಲೂ ಕಾರವಾರ-ಅಂಕೋಲಾ ಕ್ಷೇತ್ರವು ಜಲವಿದ್ಯುತ್ ಯೋಜನೆಗೆ, ಸೀಬರ್ಡ್ ನೌಕಾನೆಲೆ, ಕೊಂಕಣ ರೈಲ್ವೆಗೆ, ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಜನರು ಆಸ್ತಿಪಾಸ್ತಿ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಇಲ್ಲಿಯ ಜನ ತಮ್ಮ ಅಮೂಲ್ಯ ಜೀವನವನ್ನು ತ್ಯಾಗ ಮಾಡಿದ್ದಾರೆ. ಈ ಕುಟುಂಬಗಳ ವಿದ್ಯಾವಂತರಿಗೆ ಆಯಾ ಯೋಜನೆಗಳಲ್ಲಿ ಇದುವರೆಗೂ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗದಿರುವುದು ವಿಷಾಧನೀಯವಾಗಿದೆ.
ಕಾರವಾರ ತಾಲೂಕಿನ ಮುಡಗೇರಿ ಗ್ರಾಮದಲ್ಲಿ ಕೈಗಾರಿಕಾ ಇಲಾಖೆ ಪಡೆದುಕೊಂಡಿದ್ದ ಸಾಕಷ್ಟು ಜಮೀನು ಈಗಾಗಲೇ ಲಭ್ಯವಿದ್ದು, ಕೈಗಾರಿಕೆಗಳಿಗೆ ಅನುಕೂಲವಾಗಿದೆ. ಹೀಗಾಗಿ ಜಿಲ್ಲೆಯ ಯುವ ಜನರ ಅನುಕೂಲಕ್ಕಾಗಿ ಯಾವುದಾದರೂ ಪರಿಸರ ಪೂರಕವಾಗಿರುವ ಕೈಗಾರಿಕೆಗಳನ್ನು ಜಿಲ್ಲೆಗೆ ಕೊಡುಗೆಯಾಗಿ ನೀಡಿದರೆ ಈ ಭಾಗದ ಯುವಕರು ಅನ್ಯ ರಾಜ್ಯಗಳಿಗೆ ಉದ್ಯೋಗಕ್ಕೆ ಹೋಗುವುದು ತಪ್ಪುತ್ತದೆ. ಯಾಕೆಂದರೆ ತಮ್ಮ ತಂದೆ-ತಾಯಿಯ ಜೊತೆಗೆ ಮನೆಯಲ್ಲಿದ್ದು, ಉದ್ಯೋಗ ಮಾಡಲು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಚೈತ್ರಾ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net