ಮಹಿಳೆಯರಿಗೆ ಮೈಕ್ರೋಫೈನಾನ್ಸ್ ಕಿರುಕುಳ: ಹೊಳಲು ಗ್ರಾಮಕ್ಕೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ

Chairperson of the Womens Commission visited Hollu village Mandya
Published on

ಮಂಡ್ಯ: ಮೈಕ್ರೋ ಫೈನಾನ್ಸ್ ಕಿರುಕುಳ ನೀಡುತ್ತಿದ್ದಾರೆಂದು ಕಳೆದ ವಾರ ತಾಲೂಕಿನ ಹೊಳಲು ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದರು.

ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲಾಗುತ್ತಿದ್ದು, ಇದನ್ನು ತಪ್ಪಿಸುವಂತೆ ಆಗ್ರಹಿಸಿ ಸೆ.17ರಂದು ಗ್ರಾಮದ ಮಹಿಳೆಯರು ನೇಣಿಕೆ ಕುಣಿಕೆ ಹಿಡಿದು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ನಾಗಲಕ್ಷ್ಮೀ ಚೌಧರಿ ಗ್ರಾಮಕ್ಕೆ ಬಂದು ಮಹಿಳೆಯರಿಗೆ ಧೈರ್ಯ ತುಂಬಿದರು.

ಬಳಿಕ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಿದೆ. ಇಡೀ ರಾಜ್ಯದ ಗ್ರಾಮೀಣ ಭಾಗಕ್ಕೆ ಸಾಲ ನೀಡಿ ಬಲವಂತದ ವಸೂಲಾತಿ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಇತ್ತೀಚೆಗೆ ಹೆಣ್ಣುಮಕ್ಕಳು ಮೈಕ್ರೋಫೈನಾನ್ಸ್ ಸೇರಿದಂತೆ ಸಣ್ಣ ಸಣ್ಣ ಖಾಸಗಿ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಸುಮಾರು 20 ಖಾಸಗಿ ಫೈನಾನ್ಸ್‌ಗಳು ಇಡೀ ಗ್ರಾಮವನ್ನೇ ಆವರಿಸಿಕೊಂಡಿದೆ ಎಂದರು.

ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದ ಗ್ರಾಮದ ಮಹಿಳೆಗೆ ಮತ್ತೊಬ್ಬ ಮಹಿಳೆ ಜಾಮೀನು ನೀಡಿದ್ದಾರೆ. ಆದರೆ ಸಾಲ ಪಡೆದಾಕೆ ಗ್ರಾಮ ತೊರೆದಿದ್ದಾಳೆ. ಆದ್ದರಿಂದ ಸಾಲ ಮರುಪಾವತಿ ಮಾಡುವಂತೆ ಜಾಮೀನು ಕೊಟ್ಟ ಮಹಿಳೆಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವ ಮಾಹಿತಿ ನೀಡಿದ್ದಾರೆ. ಸಾಲ ಕಟ್ಟಲಾರದೆ ಎಷ್ಟೋ ಮಹಿಳೆಯರು ಮರ್ಯಾದೆಗೆ ಹೆದರಿ ಸಾವನ್ನಪ್ಪಿದ್ದಾರೆ. ಕಂತಿನ ಹಣದ ರೂಪದಲ್ಲಿ ಸಾಲ ಪಡೆದ ಮೇಲೆ ವಾರಕ್ಕೊಮ್ಮೆ ಕಟ್ಟಬೇಕು. ತಪ್ಪಿದರೆ ಬಡ್ಡಿಗೆ ಬಡ್ಡಿ ಹಾಕಿ ವಸೂಲಿ ಮಾಡುತ್ತಾರೆ. ಖಾಸಗಿ ಫೈನಾನ್ಸ್ ಅವರು ಹಣ ವಸೂಲಿಗೆ ಇಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ. ಕಿರುಕುಳದ ಬಗ್ಗೆ ರಾಜ್ಯಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಕನ್ನಡಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿ, ಮೈಕೋ ಫೈನಾನ್ಸ್‌ಗಳಿಂದ ಆಗಿರುವ ದುರಂತ ಪ್ರಕರಣದ ಬಗ್ಗೆ ಸಿಎಂ ಗಮನಕ್ಕೆ ತರಬೇಕು. ಈ ಮೂಲಕ ಮಹಿಳೆಯ ರಕ್ಷಣೆ ಮಾಡಬೇಕೆಂದು ಮಹಿಳಾ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದರು.

ಕನ್ನಡ ಸೇನೆಯ ಜಿ.ಮಹಾಂತಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮಧು, ವೇಣುಗೋಪಾಲ್, ಪ್ರಸನ್ನ, ಜಯಪ್ರಕಾಶ್, ಪಲ್ಲವಿ, ರೇಖಾ, ನಂದಿನಿ, ಲತಾ, ದಿವ್ಯಾ, ರೇಣುಕಾ, ಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net