

ಉಡುಪಿ: ಶಿಕ್ಷಣ, ಆರೋಗ್ಯ ಮತ್ತು ಕೋವಿಡ್-19 ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 200 ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿವೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕನೊಂಗೋ ಹೇಳಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಹೆಣ್ಮಕ್ಕಳು ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಇನ್ಸಿನರೇಟರ್ಗಳಿಲ್ಲದೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ 2 ತಿಂಗಳಲ್ಲಿ ಕ್ರಮ ತೆಗೆದುಕೊಂಡು ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ ಎಂದರು.
ಅನಧಿಕೃತ ಮದ್ರಸ ಸರ್ವೆ
ಮದ್ರಸಗಳಲ್ಲಿ ಓದುತ್ತಿರುವ ಅನೇಕ ಮಕ್ಕಳು ಸಾಮಾನ್ಯ ಶಿಕ್ಷಣದಿಂದ ವಂಚಿತರಾಗಿದ್ದು, ಜಿಲ್ಲೆಯಲ್ಲಿ ಮ್ಯಾಪ್ ಮಾಡದ ಮತ್ತು ಮಾನ್ಯತೆ ಪಡೆಯದ ಮದರಸಾಗಳ ಸರ್ವೆ ನಡೆಸಿ, ಮಕ್ಕಳನ್ನು ಆರ್‌ಟಿಇ ಕಾನೂನು ಪ್ರಕಾರ ಶಾಲೆಗಳಿಗೆ ದಾಖಲಾತಿಗೊಳಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.
ಬೀದಿಬದಿ ಮಕ್ಕಳ ಪುನರ್ವಸತಿಗೆ ಕ್ರಮ
ಕೇಂದ್ರ ಸರ್ಕಾರ ಬೀದಿ ಮಕ್ಕಳಿಗೆ ಉತ್ತಮ ಪುನರ್ವಸತಿಗೆ ಹೊಸ ನೀತಿಯನ್ನು ರೂಪಿಸಿದ್ದು, ಅದಕ್ಕಾಗಿಯೇ ಪ್ರತ್ಯೇಕ ಪೋರ್ಟಲ್ ತೆರೆಯಲಾಗಿದೆ. ಅವರಿಗೆ ಪುನರ್ವಸತಿ ಕಲ್ಪಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ಹಲವಾರು ಬಾಲಭಿಕ್ಷುಕರು ಮತ್ತು ಅವರ ಇಡೀ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಮೂಲಕ ಪುನರ್ವಸತಿ ಕಲ್ಪಿಸಬೇಕು. ಈವರೆಗೆ ಸುಮಾರು 23,000 ಮಕ್ಕಳಿಗೆ ಪುನರ್ವಸತಿ ನೀಡಿ ರಕ್ಷಿಸಲಾಗಿದೆ ಎಂದು ಅವರು ಹೇಳಿದರು. ಉಡುಪಿಯಂತಹ ಸುಸಂಸ್ಕೃತ ಹಾಗೂ ಚಿಕ್ಕ ಜಿಲ್ಲೆಯಲ್ಲಿ 14 ಅನಾಥಾಶ್ರಮಗಳಿರುವುದ ಖೇದಕರ. ಸರ್ಕಾರವು ಅನಾಥಾಶ್ರಮಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಪುನರ್ವಸತಿಗೆ ಒಳಗಾಗುವ ಮಕ್ಕಳಿಗೆ ಮನೆಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ ಉಪಸ್ಥಿತರಿದ್ದರು.