ಸಹಾಯ ಮಾಡಲು ಹೋಗಿದ್ದೇ ತಪ್ಪಾಯ್ತು, ಮಾಡೋದನ್ನು ಮಾಡಿ ಯುವಕರು ಪರಾರಿಯಾದ್ರು

222
Published on

ಚಿಕ್ಕಬಳ್ಳಾಪುರ: ವಿಳಾಸ ಕೇಳುವ ನೆಪದಲ್ಲಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕದ್ದೊಯ್ದ ಘಟನೆಯು ಶಿಡ್ಲಘಟ್ಟ ನಗರದ ಹೂವಿನ ವೃತ್ತದಲ್ಲಿ ನಡೆದಿದೆ.

ಇಬ್ಬರು ಅಪರಿಚಿತ ಯುವಕರು ಸ್ಕೂಟಿ ವಾಹನದಲ್ಲಿ ಬಂದಿದ್ದು ಹೂವಿನ ವೃತ್ತದ ಬಳಿ ಔಷಧ ಅಂಗಡಿಯೊಂದರ ಮುಂಭಾಗ ನಿಂತಿದ್ದ ಮಯೂರ ವೃತ್ತ ವಾಸಿ ಸುಬ್ಬಣ್ಣ(65)ಗೆ ವಿಳಾಸವನ್ನು ಕೇಳಿದ್ದಾರೆ. ಇದಕ್ಕೆ ಸಹಾಯ ಮಾಡಲು ಹೋಗಿದ್ದೇ ತಪ್ಪಾಗಿದೆ. ನಯವಾಗಿ ಮಾತನಾಡುತ್ತಿದ್ದ ಯುವಕರು ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸ್ಕೂಟಿಯಲ್ಲಿ ಮುಂದೆ ಕುಳಿತು ಡ್ರೈವ್ ಮಾಡುತ್ತಿದ್ದ ಯುವಕ ಮಾತ್ರ ಹೆಲ್ಮೆಟ್ ಧರಿಸಿದ್ದ. ಚಿನ್ನದ ಸರ ಕಿತ್ತು ಪರಾರಿಯಾಗಿದ್ದನ್ನು ಕಂಡ ಅಲ್ಲಿನ ಕೆಲವರು ನೋಡಿ ಗಾಬರಿಯಿಂದ ಏಯ್ ಏಯ್ ಎಂದು ಜೋರಾಗಿ ಕೂಗಾಡಿದ್ದಾರೆ. ಅಷ್ಟರಲ್ಲಿ ಅವರು ಅಲ್ಲಿಂದ ಪರಾರಿಯಾಗಿದ್ದಾರೆ.

ಜೋರಾಗಿ ಏಯ್ ಎಂದು ಅರಚಿದ ಕೆಲವರ ಕಡೆ ಸ್ಕೂಟಿಯಲ್ಲಿ ಹಿಂದೆ ಕುಳಿತಿದ್ದವ, ತುಟಿ ಹಲ್ಲು ಕಚ್ಚಿಕೊಂಡು ಹುಬ್ಬೇರಿಸಿ ಆವಾಜ್ ಹಾಕಿ ಎಚ್ಚರಿಕೆ ಕೊಡುವ ರೀತಿಯಲ್ಲಿ ತೋರು ಬೆರಳನ್ನು ತೋರಿದ್ದಾನೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಗೆ ಸುಬ್ಬಣ್ಣ ದೂರು ನೀಡಿದ್ದು ಸುಮಾರು 1.22 ಲಕ್ಷ ರೂ ಮೌಲ್ಯದ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net