ಮಾಂಗಲ್ಯ ಸರಗಳ್ಳತನ, ಬೆನ್ನತ್ತಿದ್ದ ರೈತರಿಗೆ ಭಯ ಬಿದ್ದು ವಾಹನ ಬಿಟ್ಟು ಪರಾರಿಯಾದ ಕಳ್ಳರು

1112
Published on

ಚಿಕ್ಕಬಳ್ಳಾಪುರ: ಮಾವಿನ ತೋಟದಿಂದ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ದಾರಿಯಲ್ಲಿ ನಿಲ್ಲಿಸಿ, ವಿಳಾಸ ಕೇಳುವ ನೆಪದಲ್ಲಿ ಆಕೆಯ ಕತ್ತಿನಲ್ಲಿದ್ದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಚಿಂತಾಮಣಿ ತಾಲೂಕಿನ ಪೆರಮಾಚನಹಳ್ಳಿಯ ಗೌರಮ್ಮ(62) ಸರವನ್ನು ಕಳೆದುಕೊಂಡವರು. ಎಂದಿನಂತೆ ಮಾವಿನ ತೋಟಕ್ಕೆ ಹೋಗಿ, ಕಳೆಗಿಡ ಗಳನ್ನು ಕಿತ್ತು ಹಾಕಿದ ಬಳಿಕ ಮನೆಗೆ ವಾಪಸ್ಸಾಗುತ್ತಿದ್ದಾಗ ಸರಗಳ್ಳತನ ನಡೆದಿದೆ. ಕೆಂಪು ಬಣ್ಣದ ಟಿ ಶರ್ಟ್ ಮತ್ತು ತಿಳಿ ನೀಲಿ ಪ್ಯಾಂಟ್ ಧರಿಸಿದ್ದ ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿ ಮತ್ತು ನೀಲಿ ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ನಿಕ್ಕರ್ ಧರಿಸಿದ್ದ ೩೦ ವರ್ಷ ವಯಸ್ಸಿನ ವ್ಯಕ್ತಿ ಮಹಿಳೆಯನ್ನು ಮಾತನಾಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಹೊಸಕೋಟೆಗೆ ಹೋಗಿ ದಾರಿ ಕೇಳಿದ್ದು ಇದಕ್ಕೆ ಉತ್ತರಿಸುತ್ತಿದ್ದಂತೆ ಹಿಂಬದಿಯ ಸವಾರ ಮಹಿಳೆಯ ಕೊರಳಿನಲ್ಲಿದ್ದ 1 ಲಕ್ಷ ರೂ ಬೆಲೆ ಬಾಳುವ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಇದರಿಂದ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದನ್ನು ಕೇಳಿಸಿಕೊಂಡ ಪಕ್ಕದ ಜಮೀನಿನ ರೈತರಾದ ಆನಂದ ಮತ್ತು ಪ್ರದೀಪ್ ಕಳ್ಳ ಅಸಾಮಿಗಳಿಬ್ಬರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಇದನ್ನು ನೋಡಿದ ಕಳ್ಳರು ಹೋಂಡಾ ದ್ವಿಚಕ್ರ ವಾಹನವನ್ನು ಸಮೀಪದ ಖಾಸಗಿ ಜಮೀನಿನಲ್ಲಿ ಬಿಟ್ಟು, ತಪಥೇಶ್ವರ ಬೆಟ್ಟದ ಕಡೆ ಓಡಿ ಹೋಗಿದ್ದಾರೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net