

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಚೈನ್ಲಿಂಕ್ ಕಂಪನಿಯ ಧೋಖಾ ಬೆಳಕಿಗೆ ಬಂದಿದೆ. ಕಚೇರಿ ತೆರೆಯದೆ ಆನ್ಲೈನ್ನಿಂದಲೇ ಅಮಾಯಕರಿಗೆ ಬಲೆ ಬೀಸಿ 2 ಸಾವಿರ ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿರುವ ಈ ಬೃಹತ್ ಪ್ರಕರಣ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಡಿ.ಎಸ್.ರಂಗನಾಥ್ ಸಿಸಿಬಿ ಬಲೆಗೆ ಬಿದ್ದಿದ್ದು, ಇನ್ನೂ ಹಲವರಿಗೆ ಶೋಧ ನಡೆಸಲಾಗಿದೆ.
ರಂಗನಾಥ್ ಇತರರ ಜತೆ ಸೇರಿಕೊಂಡು ಆನ್ಲೈನ್ನಲ್ಲಿ ಡಿಜಿಟೆಕ್ವಾರ್ಕ್ ಎಂಬ ಕಂಪನಿ ತೆರೆದಿದ್ದ. ಕಚೇರಿ ಇಲ್ಲದ ಈ ಕಂಪನಿ ಬಗ್ಗೆ ಆನ್ಲೈನ್ನಲ್ಲೇ ಜಾಹೀರಾತು ಕೊಟ್ಟು ಬಲೆ ಬೀಸುತ್ತಿದ್ದ. ಶೇ.25 ಲಾಭಾಂಶದ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸಿಕೊಂಡು ಸದಸ್ಯತ್ವ ನೀಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು, ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
15 ಸಾವಿರ ರೂ. ಹೂಡಿಕೆ ಮಾಡಿ ಸದಸ್ಯತ್ವ ಪಡೆದರೆ 2021ರ ಡಿಸೆಂಬರ್ನಲ್ಲಿ 1 ಲಕ್ಷ ರೂ. ಲಾಭಾಂಶ ಕೊಡುತ್ತೇವೆ. 2022ರಲ್ಲಿ 5 ಲಕ್ಷ ರೂ., 2023ರಲ್ಲಿ 12 ಲಕ್ಷ ರೂ., 2025ರಲ್ಲಿ 25 ಲಕ್ಷ ರೂ. ಕೊಡುವುದಾಗಿ ನಂಬಿಸುತ್ತಿದ್ದ. ಇನ್ನೂ ಹೆಚ್ಚಿನ ಬಡ್ಡಿ ಬೇಕಾದರೆ 1 ಲಕ್ಷ ರೂ. ಹೂಡಿಕೆ ಮಾಡಿದರೆ 2025ರ ಜನವರಿಗೆ 3 ಕೋಟಿ ರೂ. ಲಾಭಾಂಶ ಕೊಡುವುದಾಗಿ ಆಸೆ ತೋರಿಸಿದ್ದ. ವಾಟ್ಸ್ಆಪ್, ಯೂಟ್ಯೂಬ್, ಇತರ ಸಾಮಾಜಿಕ ಜಾಲತಾಣದಲ್ಲಿ ಮೀಟಿಂಗ್ ಕರೆದು ಪ್ರಚಾರ ಮಾಡುತ್ತಿದ್ದ. ಒಟ್ಟಾರೆ 2 ಸಾವಿರ ಜನರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡಿದ್ದಾನೆ.
ಚೈನ್ಲಿಂಕ್ ಜಾಲ: ಸದಸ್ಯತ್ವ ಪಡೆದ ವ್ಯಕ್ತಿಗೆ ಯೂಸರ್ ನೇಮ್ ಪಾಸ್ವರ್ಡ್ ನೀಡಿ ಏಜೆಂಟ್ಗಳಾಗಿ ಮಾಡುತ್ತಿದ್ದ. ಆನಂತರ ತಮ್ಮ ಎಡ-ಬಲ ಸದಸ್ಯರನ್ನು ನೋಂದಾಯಿಸಿದರೆ ಶೇ.25 ಕಮಿಷನ್ ಹಾಗೂ ತಾವು ಸದಸ್ಯತ್ವ ಮಾಡಿಸಿದ ವ್ಯಕ್ತಿಗಳು ಹೊಸಬರನ್ನು ಕರೆತಂದರೆ ಅವರ ಕಡೆಯಿಂದ ಶೇ.1 ಕಮಿಷನ್ ಕೊಡುವ ಆಮಿಷವೊಡ್ಡಿದ್ದ.
ಕ್ರಿಪ್ಟೋದಲ್ಲಿ ಹೂಡಿಕೆ: ಸಾರ್ವಜನಿಕರಿಂದ ಸಂಗ್ರಹಿಸಿದ್ದ ಕೋಟ್ಯಂತರ ರೂ. ಹಣವನ್ನು ಕ್ರಿಪ್ಟೋ ಕರೆನ್ಸಿಯಾದ ಟ್ರೋನ್ ಕಾಯಿನ್ನಲ್ಲಿ ಹೂಡಿಕೆ ಮಾಡುತ್ತಿದ್ದ. ಆನಂತರ ತನ್ನ ಕಂಪನಿ ಹೆಸರಿನಲ್ಲಿಯೇ ಡಿಟಿಎಂ ಟೋಕನ್ ಎಂದು ರೂಪಿಸಿ ಹೂಡಿಕೆದಾರರಿಗೆ ಕೊಟ್ಟು ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದ. ಆರೋಪಿಯ ಬ್ಯಾಂಕ್ ಖಾತೆ ವಿವರ ಮತ್ತು ಚರಾಸ್ತಿ, ಸ್ಥಿರಾಸ್ತಿ ಜಪ್ತಿ ಮಾಡುವತ್ತ ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.