ಹೊಸಕೋಟೆ ತೊರೆದ ಚಡ್ಡಿಗ್ಯಾಂಗ್?

chaddi gang
Published on

 ಶಿವರಾಜ ಎಂ ಬೆಂಗಳೂರು ಗ್ರಾಮಾಂತರ

ಕಳೆದೆರಡು ತಿಂಗಳ ಹಿಂದೆ ಹೊಸಕೋಟೆ ನಗರದ ಕುವೆಂಪುನಗರದಲ್ಲಿ ಕಿಟಕಿಗಳ ಸರಳು ಮುರಿದು ದರೋಡೆಗೆ ಯತ್ನಿಸಿದ್ದ ಚಡ್ಡಿಗ್ಯಾಂಗ್ ದರೋಡೆಕೋರರ ತಂಡ ಹೊಸಕೋಟೆ ತೊರೆದು ತಮಿಳುನಾಡಿನ ಕಡೆಗೆ ಕಾಲ್ಕಿತ್ತಿದೆಯೇ? ಹೊಸಕೋಟೆ ಪೊಲೀಸರ ಹೈ ಅಲರ್ಟ್‌ನಿಂದ ಕಂಗಾಲಾದ ಗ್ಯಾಂಗ್ ಜಿಲ್ಲೆಯಿಂದಲೇ ಪರಾರಿಯಾಗಿದೆಯೇ ?.. ಹೌದು.. ಎನ್ನುವುದು ಪೊಲೀಸರ ಖಚಿತ ಮಾಹಿತಿಯಾಗಿದೆ.

ಕುವೆಂಪುನಗರದಲ್ಲಿ ಚಡ್ಡಿಗ್ಯಾಂಗ್‌ನ ದರೋಡೆ ಪ್ರಯತ್ನದ ಬಗ್ಗೆ ಹೊಸಕೋಟೆ ಪೊಲೀಸರು ಸಾಕಷ್ಟು ಅಲರ್ಟ್ ಆಗಿದ್ದರು. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಚಡ್ಡಿಗ್ಯಾಂಗ್‌ನ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದರು. ಪೊಲೀಸ್ ಸಹಾಯವಾಣಿ, ಠಾಣೆ ದೂರವಾಣಿ ಸಂಖ್ಯೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ಮಾಡಿದ್ದರು. ಅಲ್ಲದೆ ವಿಶೇಷ ತಂಡವನ್ನು ರಚಿಸಿ ದರೋಡೆಕೋರರ ಬೆನ್ನುಬಿದ್ದಿದ್ದರು. ಇದರಿಂದ ವಿಚಲಿತರಾದ ಗ್ಯಾಂಗ್ ಜಿಲ್ಲೆಯಿಂದಲೇ ಪರಾರಿಯಾಗಿದೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ ಬಂಧನ! ಇತ್ತೀಚಿನ ದಿನಗಳಲ್ಲಿ ಹೊಸಕೋಟೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮುಳಬಾಗಿಲಿನಲ್ಲಿ ದರೋಡೆಕೋರರ ಗ್ಯಾಂಗ್ ಸಿಕ್ಕಿಬಿದ್ದಿತ್ತು. ಅದೇ ರೀತಿ ಆವಲಹಳ್ಳಿಯಲ್ಲಿ ದರೋಡೆಕೋರರ ತಂಡ ಸೆರೆಯಾಗಿತ್ತು. ಇದೇ ರೀತಿ ಮನೆಗಳವು, ದರೋಡೆ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಇದರಲ್ಲಿ ಯಾವುದೂ ಚಡ್ಡಿಗ್ಯಾಂಗ್‌ನ ನೆರಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಇದಲ್ಲದೇ ತಮಿಳುನಾಡು ಪೊಲೀಸರಿಗೆ ದರೋಡೆಕೋರರ ತಂಡವೊಂದು ಸಿಕ್ಕಿಬಿದ್ದಿದ್ದು, ಇದೇ ಗ್ಯಾಂಗ್ ಹೊಸಕೋಟೆಯಲ್ಲಿ ದರೋಡೆಗೆ ಯತ್ನ ನಡೆಸಿದೆ ಎಂಬ ಅನುಮಾನ ದಟ್ಟವಾಗಿದ್ದು ಈ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಮರಾದಲ್ಲಿ 5 ಮಂದಿ ಸೆರೆ: ಹೊಸಕೋಟೆ ನಗರದ ಕುವೆಂಪು ನಗರದಲ್ಲಿ ಡಿ.23 ರ ರಾತ್ರಿ 2 ಗಂಟೆ ಸುಮಾರಿಗೆ ದರೋಡೆ ಕೋರನೊಬ್ಬ ಮನೆಯ ಕಿಟಕಿಯ ಸರಳು ಮುರಿದು ಮನೆಗೆ ನುಗ್ಗುವ ವಿಲ ಯತ್ನ ನಡೆಸಿರುವುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಂತರದಲ್ಲಿ ಮುಂದಿನ ಬೀದಿಯಲ್ಲಿನ ಕೆಲವು ಕ್ಯಾಮರಾಗಳಲ್ಲಿ 5 ಮಂದಿ ಚಡ್ಡಿಧರಿಸಿದ್ದ ಮುಸುಕುಧಾರಿಗಳ ಚಲನವಲನ ಪತ್ತೆಯಾಗಿದೆ. ಜತೆಗೆ ಅವರು ಸೊಂಟದಲ್ಲಿ ಮಾರಕಾಸಗಳನ್ನು ಇಟ್ಟುಕೊಂಡಿರುವುದು ಜತೆಗೆ ಸ್ಕೂಡ್ರೈವರ್, ಕಟಿಂಗ್‌ಪ್ಲೇರ್, ಸುತ್ತಿಗೆಯಂತ ವಸ್ತುಗಳನ್ನು ಇಟ್ಟುಕೊಂಡಿರುವುದು ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಇದು ಹಳೇಯ ಚಡ್ಡಿಗ್ಯಾಂಗ್‌ನ ಸದಸ್ಯರೇ ಇರಬಹುದು ಎಂಬುದು ಪೊಲೀಸರ ಶಂಕೆಯಾಗಿದೆ. ಹೊಸಕೋಟೆ ಕುವೆಂಪುನಗರದಲ್ಲಿ ಟ್ರಾನ್ಸ್‌ಪೋರ್ಟ್ ಕಚೇರಿಯಲ್ಲಿಯೇ ಮನೆ ಮಾಡಿಕೊಂಡು ವಾಸವಾಗಿರುವ ಕುಟುಂಬವಿದೆ. ದರೋಡೆಕೋರರು ಮನೆ ಎಂದು ತಿಳಿದು ದರೋಡೆಗೆ ಯತ್ನಿಸಿದ್ದಾರೆ. ಆದರೆ ಟ್ರಾನ್ಸ್‌ಪೋರ್ಟ್ ಕಚೇರಿಯಾಗಿದ್ದರಿಂದ ಕಾರ್ಯಾಚರಣೆಯನ್ನು ಅರ್ಧಕ್ಕೆ ಬಿಟ್ಟು ಮರಳಿದ್ದರು.

ಪೊಲೀಸರ ಮನವಿ: ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಯಲ್ಲಿ ದರೋಡೆಕೋರರು ಉತ್ತರ ಭಾರತವರಂತೆ ಕಾಣುತ್ತಿದ್ದು, ಕುಖ್ಯಾತ ಚಡ್ಡಿಗ್ಯಾಂಗ್ ಎಂಬ ಸಂಶಯ ಬಲವಾಗಿದೆ, ಈ ದರೋಡೆಕೋರರು ಬೀಗ ಹಾಕಿರುವ ಮನೆಗಳನ್ನೇ ಗುರುತಿಸಿ ಕಳ್ಳತನ ಮಾಡುತ್ತಾರೆ, ಕಳ್ಳತನದ ವೇಳೆ ಹಲ್ಲೆ, ಹತ್ಯಾಯತ್ನವೂ ನಡೆಯುತ್ತದೆ ಈ ಹಿನ್ನೆಲೆಯಲ್ಲಿ ಜನ ಎಚ್ಚರಿಕೆ ವಹಿಸಬೇಕು ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೆ ಹತ್ತಿರದ ಪೊಲೀಸ್ ಠಾಣೆ ಅಥವಾ ಹೆಲ್ತ್‌ಲೈನ್ 112 ಕರೆ ಮಾಡಬೇಕು, ಅಥವಾ ಹೊಸಕೋಟೆ ಠಾಣೆ ದೂರವಾಣಿ 080 27931570 ಅಥವಾ ಪೊಲೀಸ್ ಇನ್ಸ್ ಪೆಕ್ಟರ್ ದೂರವಾಣಿ 9480802432 ಸಂಖ್ಯೆಗೆ ತಕ್ಷಣ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಹೊಸಕೋಟೆ ಕುವೆಂಪುನಗರದ ದರೋಡೆ ಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತಂಡದೊಂದಿಗೆ ಕಾರ್ಯಾಚರಣೆ ನಡೆಸಲಾಗಿತ್ತು. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚಡ್ಡಿಗ್ಯಾಂಗ್ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಲಾಗಿತ್ತು. ಪ್ರಸ್ತುತ ಪೊಲೀಸರ ಕಾರ್ಯಾಚರಣೆ ಮಾಹಿತಿಯಂತೆ ಗ್ಯಾಂಗ್ ಜಿಲ್ಲೆಯಿಂದಲೇ ಕಾಲ್ಕಿತ್ತಿದೆ. ಪ್ರಸ್ತುತ ತಮಿಳುನಾಡಿನಲ್ಲಿ ಬಂಧನವಾಗಿರುವ ಮಾಹಿತಿ ಇದೆ. ಆದರೂ ಸಾರ್ವಜನಿಕರು ಜಾಗೃತರಾಗಿರಬೇಕು.

ಶಂಕರಗೌಡ ಪಾಟೀಲ್ ಡಿವೈಎಸ್‌ಪಿ ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net