

ಚಡಚಣ: ಪಟ್ಟಣದ ಪ್ರಸಿದ್ಧ ಜವಳಿ ವ್ಯಾಪಾರಿ ಬಾಹುಬಲಿ ಮುತ್ತಿನ ಸಹೋದರರು ತಮ್ಮ ಅಂಗಡಿಯ ಬಡ ಕಾರ್ಮಿಕರಿಗೆ ಶುಕ್ರವಾರ ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ವಿತರಿಸಿ ಮಾನವೀಯತೆ ಮೆರೆದರು.
ಕರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಕಾರ್ಮಿಕರು ಸಂಕಷ್ಟದಲ್ಲಿರುವುದನ್ನು ಅರಿತ ಬಾಹುಬಲಿ ಹಾಗೂ ಅಜೀತ ಮುತ್ತಿನ ಸಹೋದರರು ತಮ್ಮ ಅಂಗಡಿಯಲ್ಲಿ ಕೆಲಸ ಮಾಡುವ 600 ಕಾರ್ಮಿಕರಿಗೆ ಹಾಗೂ ಪಟ್ಟಣದ 400 ಕಡುಬಡವ ಕುಟುಂಬಗಳ ಜೀವನಾವಶ್ಯಕ 2500 ರೂ. ಮೌಲ್ಯದ 15 ವಸ್ತುಗಳ ಕಿಟ್‌ನ್ನು ವಿತರಿಸಿದರು.
ಪಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ ಮಾತನಾಡಿ, ಕಾರ್ಮಿಕರು ಕೆಲಸವಿಲ್ಲದೆ ತೊಂದರೆಯಲ್ಲಿದ್ದಾಗ ಬಾಹುಬಲಿ ಮುತ್ತಿನ ಸಹೋದರರು 25 ಲಕ್ಷ ರೂ. ವೆಚ್ಚದಲ್ಲಿ ಅವರ ಸಹಾಯಕ್ಕೆ ನಿಂತಿರುವುದು ಶ್ಲಾಘನಾರ್ಹ ಕಾರ್ಯ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಕೆ. ಕುಲಕರ್ಣಿ, ಮಹಾದೇವ ಯಂಕಂಚಿ, ಅಜೀತ ಮುತ್ತಿನ, ಶಾಂತಿನಾಥ ಮುತ್ತಿನ, ಆದಿತ್ಯ ಮುತ್ತಿನ, ಅಶೋಕ ಅಗಸರ, ಗುಂಡು ಪ್ರಥಮಶೆಟ್ಟಿ, ಪ್ರೊ.ಎಂ.ವಿ. ಕಟಗೇರಿ ಉಪಸ್ಥಿತರಿದ್ದರು.