

ವಿಜಯಪುರ: ಭೀಮಾತೀರದ ಚಡಚಣ ತಾಲೂಕಿನ ಶಿರಾಡೋಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಅಬಕಾರಿ ಅಧಿಕಾರಿಗಳು 5 ಲಕ್ಷ ರೂ. ಮೌಲ್ಯದ 12.05 ಕೆಜಿ ಅಫೀಮು ವಶಕ್ಕೆ ಪಡೆದಿದ್ದಾರೆ.
ಗುರುವಾರ ಸಂಜೆಯೇ ದಾಳಿ ನಡೆಸಿದ್ದು, ಅಫೀಮು ಸಾಗಿಸುತ್ತಿದ್ದ ಕಂಟೇನರ್ ಸಹಿತ ಒಟ್ಟು 35 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಜಂಟಿ ಆಯುಕ್ತ ಡಾ.ವೈ. ಮಂಜುನಾಥ ಮಾತನಾಡಿ, ರಾಜಸ್ಥಾನದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಂಟೇನರ್‌ನ್ನು ಚಡಚಣ ತಾಲೂಕಿನ ಶಿರಾಡೋಣನಲ್ಲಿ ತಡೆದು ದಾಳಿ ನಡೆಸಿದಾಗ ಅಫೀಮು ಪತ್ತೆಯಾಗಿದೆ. ಲಾರಿ ಚಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದಾಗಿ ತಿಳಿಸಿದ್ದಾರೆ.
ಅಬಕಾರಿ ಆಯುಕ್ತ ಅರುಣಕುಮಾರ ನೇತೃತ್ವದಲ್ಲಿ ಚಡಚಣ ಶಾಖೆಯ ಅಬಕಾರಿ ಪಿಎಸ್‌ಐ ಸದಾಶಿವ ಕೋರ್ತಿ ಹಾಗೂ ಗಾರ್ಡ್‌ಗಳಾದ ಅಶೋಕ ಬಿರಾದಾರ ಮತ್ತು ಎ.ಎಸ್. ಗೊಣಸಗಿ ಅವರ ತಂಡ ಹಾಗೂ ಅಧಿಕಾರಿ ಶ್ರೀ ಪಡಸಲಗಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ಅವರು ತಿಳಿಸಿದರು.
ಪ್ರಾಥಮಿಕ ತನಿಖೆಯಲ್ಲಿ ಈ ಕಂಟೇನರ್ ರಾಜಸ್ಥಾನದಿಂದ ಬೆಂಗಳೂರಿಗೆ ದ್ವಿಚಕ್ರ ವಾಹನಗಳ ಬಿಡಿಭಾಗದೊಂದಿಗೆ ಹೊರಟಿತ್ತು. ಇದರಲ್ಲೇ ಅಫೀಮು ಸಾಗಾಟ ಮಾಡಲಾಗುತ್ತಿತ್ತು. ಈ ವಿಷಯ ತಿಳಿದ ಕೂಡಲೇ ನಾಕಾ ಬಂದಿ ಮಾಡಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾಗಿ ತಿಳಿಸಿದರು.
ಮುಂಬೈ ಕರ್ನಾಟಕ ಪ್ರಾಂತ್ಯದಲ್ಲಿ ಅತಿ ದೊಡ್ಡ ಮೌಲ್ಯದ ಅಫೀಮು ಸಾಗಣೆ ಜಾಲ ಪತ್ತೆ ಹಚ್ಚಲಾಗಿದೆ. ಹೆಚ್ಚಿನ ತನಿಖೆ ಕೈಗೊಂಡು ಜಾಲವನ್ನು ಸಂಪೂರ್ಣ ಭೇದಿಸಲಾಗುವುದು.
ಡಾ.ವೈ. ಮಂಜುನಾಥ, ಅಬಕಾರಿ ಜಂಟಿ ಆಯುಕ್ತ