

ಚಡಚಣ: ರೈತರು ಆರ್ಥಿಕವಾಗಿ ಸಬಲರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ, ಅಗತ್ಯ ಸಹಾಯಧನ ಬಿಡುಗಡೆಗೊಳಿಸುತ್ತಿವೆ. ಅವುಗಳ ಸದುಪಯೋಗಪಡೆದುಕೊಳ್ಳಬೇಕು ಎಂದು ಬಿಜೆಪಿ ಯುವ ಮುಖಂಡ ಗೋಪಾಲ ಕಾರಜೋಳ ಹೇಳಿದರು.
ಸಮೀಪದ ಹಾವಿನಾಳದಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಯೋಗ್ಯ ದರ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಾಮಾಣಿಕವಾಗಿ ಸ್ಪಂದಿಸುತ್ತಿವೆ. ತೊಗರಿ ಬೆಳೆಗೆ ಸರ್ಕಾರ ಮಾರುಕಟ್ಟೆ ಬೆಲೆಗಿಂತ ಅಧಿಕ ಬೆಲೆ ನಿಗದಿಗೊಳಿಸಿ ಮಧ್ಯವರ್ತಿಗಳಿಲ್ಲದೇ ನೇರ ಖರೀದಿಸಿ ರೈತರಿಗೆ ಅನುವಯ ಮಾಡಿಕೊಟ್ಟಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕಲ್ಲು ಉಟಗಿ ಮಾತನಾಡಿ, ತಮ್ಮ ಸಂಘದ ಅಡಿಯಲ್ಲಿ ಈ ಕೇಂದ್ರ ನಿರ್ವಹಿಸಲಾಗುತ್ತಿದ್ದು, ರೈತರಿಗೆ ಯಾವುದೇ ರೀತಿ ಮೋಸವಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಹಾವಿನಾಳ ಕಲ್ಮಠದ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಪಿಕೆಪಿಎಸ್ ಉಪಾಧ್ಯಕ್ಷ ಡಿ.ಎಂ. ಬನಸೋಡೆ, ಮುಖಂಡ ಅಪ್ಪುಗೌಡ ಪಾಟೀಲ (ಗೊಳಗಿ), ಮಲ್ಲಿಕಾರ್ಜುನ ಸಾಲೋಟಗಿ, ಪ್ರಲ್ಹಾದ ಕಾಂಬಳೆ, ಕಾಸುಗೌಡ ಕಾಮಗೊಂಡ, ಸಿದ್ದಪ್ಪ ಉಟಗಿ, ರಾಮ ಅವಟಿ, ಶ್ರೀಶೈಲ ಶಿರನಾಳ, ಕಾರ್ಯದರ್ಶಿ ಎಸ್.ಬಿ. ಬಡಿಗೇರ ಮತ್ತಿತರರಿದ್ದರು.