ಹಳ್ಳ ಹಿಡಿದ ಚಡಚಣ ಏತನೀರಾವರಿ ಯೋಜನೆ, ಅಪೂರ್ಣ ಕಾಮಗಾರಿಗೆ ಪರಿಪೂರ್ಣ ಬಿಲ್, ಸರ್ಕಾರದ ವಿರುದ್ಧ ಸಂಸದ ರಮೇಶ ಜಿಗಜಿಣಗಿ ಆಕ್ರೋಶ

ramesh jigajinagi
Published on

ವಿಜಯಪುರ: ಅಪೂರ್ಣ ಕಾಮಗಾರಿಗೆ ಪರಿಪೂರ್ಣ ಪ್ರಮಾಣ ಪತ್ರ ನೀಡಿದ್ದಲ್ಲದೇ ಸಂಪೂರ್ಣ ಬಿಲ್ ಪಾವತಿ ಮಾಡಿರುವ ಸರ್ಕಾರದ ಕ್ರಮದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಸಂಸದ ರಮೇಶ ಜಿಗಜಿಣಗಿ, ತಿಂಗಳೊಳಗಾಗಿ ರೈತರ ಜಮೀನುಗಳಿಗೆ ನೀರು ದೊರಕದೇ ಇದ್ದರೆ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಚಡಚಣ ಏತ ನೀರಾವರಿ ಯೋಜನೆ ಕಾಮಗಾರಿ ಪೂರಿಪೂರ್ಣಗೊಳ್ಳದಿದ್ದರೂ ಪೂರ್ಣಗೊಂಡಿದೆ ಎಂದು ಪ್ರಮಾಣ ಪತ್ರ ನೀಡಲಾಗಿದೆ. ವಾಸ್ತವದಲ್ಲಿ ಪೈಪ್‌ಲೈನ್ ಕಾಮಗಾರಿ ಕಳಪೆಯಾಗಿದ್ದು, ರೈತರ ಜಮೀನುಗಳಿಗೆ ಹನಿ ನೀರು ಸಹ ಪೂರೈಕೆಯಾಗುತ್ತಿಲ್ಲ. ಈಗಾಗಲೇ ಈ ಕುರಿತು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸೇರಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೂ ಪತ್ರ ಬರೆಯಲಾಗಿದೆ. ಕೂಡಲೇ ಸ್ಪಂದಿಸದಿದ್ದರೆ ಚಡಚಣ ತಹಸೀಲ್ದಾರ್ ಕಚೇರಿ ಎದುರು ರೈತರೊಂದಿಗೆ ಧರಣಿ ಆರಂಭಿಸುವುದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.

ಚಡಚಣ ಏತನೀರಾವರಿ ಮಹತ್ವಾಕಾಂಕ್ಷಿ ಯೋಜನೆ. ಇದರಿಂದ ಚಡಚಣ ಭಾಗದ ಏಳು ಗ್ರಾಮಗಳು ನೀರಾವರಿ ಸೌಲಭ್ಯಕ್ಕೊಳಪಡಲಿವೆ. ಚಡಚಣ ಸೇರಿದಂತೆ ಹಾವಿನಾಳ,ಗೋಡ್ಯಾಳ, ಹಾಲಳ್ಳಿ, ಬರಡೋಲ, ಶಿರಾಡೋಣ, ರೇವತಗಾಂವ ಗ್ರಾಮದ ಒಟ್ಟು 22721 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. ಅಂದಾಜು 500 ಕೋಟಿ ರೂ.ವೆಚ್ಚದ ಈ ಯೋಜನೆ ಅಪೂರ್ಣವಾಗಿದ್ದು, ಪೈಪ್‌ಲೈನ್ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಎಲ್ಲೆಂದರಲ್ಲಿ ಪೈಪ್‌ಗಳು ಸೋರಿಕೆಯಾಗುತ್ತಿವೆ. ಕೆಲವು ಕಡೆ ಪೈಪ್‌ಲೈನ್ ಕಾಮಗಾರಿಯೇ ಕೈಗೊಂಡಿಲ್ಲ. ಈವರೆಗೆ ಒಂದೇ ಒಂದು ಹನಿ ನೀರು ಬಂದಿಲ್ಲ. ಯಾವುದಾದರೂ ಜಮೀನುಗಳಿಗೆ ನೀರು ತಲುಪಿದ್ದರೆ ರಾಜಕಾರಣ ತ್ಯಜಿಸುವುದಾಗಿ ಖಡಕ್ ಆಗಿ ನುಡಿದರು.

2017ರಲ್ಲಿ ಆರಂಭವಾದ ಈ ಕಾಮಗಾರಿ ಇಷ್ಟೊತ್ತಿಗಾಗಲೇ ಮುಗಿಯಬೇಕಿತ್ತು. ಬೆಳಗಾವಿಯ ಆದಿತ್ಯ ಕನ್ಸಟ್ರಕ್ಷನ್‌ಗೆ ಹೆಡ್‌ವರ್ಕ್ ಕಾಮಗಾರಿ ವಹಿಸಲಾಗಿದೆ. 109.24 ಕೋಟಿ ರೂ.ಗಳಿಗೆ ಗುತ್ತಿಗೆ ಒಪ್ಪಂದವಾಗಿದ್ದು, ಆ ಪೈಕಿ 105.2 ಕೋಟಿ ರೂ.ಗೆ ಗುತ್ತಿಗೆ ವಹಿಸಲಾಗಿದೆ. ಜಿ.ಶಂಕರ ಎಂಬುವರಿಗೆ ಪೈಪ್ ಅಳವಡಿಕೆ ಜಾಲದ ಕಾಮಗಾರಿಯ ಗುತ್ತಿಗೆ ನೀಡಲಾಗಿದ್ದು, 186.5 ಕೋಟಿ ರೂ.ಗೆ ಒಪ್ಪಂದವಾಗಿತ್ತು. 2018 ಅ. 31ಕ್ಕೆ ಒಪ್ಪಂದವಾಗಿದ್ದು, 2020ಕ್ಕೆ ಕಾಮಗಾರಿ ಮುಗಿಸಬೇಕಿತ್ತು. ಜೊತೆಗೆ ಐದು ವರ್ಷದ ನಿರ್ವಹಣೆ ಜವಾಬ್ದಾರಿ ಕೂಡ ನೀಡಲಾಗಿತ್ತು. ಬ್ಯಾರೇಜ್ ನಿರ್ಮಾಣ ಕಾಮಗಾರಿ ಗುತ್ತಿಗೆ ಸಹ ಜಿ.ಶಂಕರ ಅವರಿಗೇ ನೀಡಲಾಗಿದೆ. ಆದರೆ, ಈವರೆಗೆ ಕಾಮಗಾರಿ ಪರಿಪೂರ್ಣಗೊಂಡಿಲ್ಲವೆಂದರು.

ಒಟ್ಟು 500 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಈ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ಇಷ್ಟೊಂದು ಹಣ ಎಲ್ಲಿ ಹೋಯಿತು? ಯಾರು ತಿಂದರು? ರೈತರ ಹೊಲಗಳಿಗೆ ನೀರು ಹೋಗದೇ ಕಾಮಗಾರಿ ಪೂರ್ಣ ಮಾಡಿ ಪೂರ್ಣಗೊಂಡಿದೆ ಎಂಬ ಪ್ರಮಾಣ ಪತ್ರ ತೆಗೆದುಕೊಂಡರೆ ಹೇಗೆ? ಕೂಡಲೇ ಎಚ್ಚೆತ್ತುಕೊಂಡು ಕಾಮಗಾರಿ ಕೈಗೊಳ್ಳದೇ ಹೋದರೆ ಹೋರಾಟ ಹಮ್ಮಿಕೊಳ್ಳಲಾಗುವುದಲ್ಲದೇ ಅದಕ್ಕೂ ಬಗ್ಗದಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.

ಮುಖಂಡರಾದ ಭೀಮನಗೌಡ ಬಿರಾದಾರ, ಸಿ.ಎಸ್. ಪಾಟೀಲ ಹಾಗೂ ವಿಜಯ ಜೋಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net