ಚಾ. ಬೆಟ್ಟ ಅರಣ್ಯ ಅತಿಕ್ರಮ ಪ್ರವೇಶಕ್ಕೆ ಬೀಳಲಿದೆ ದುಬಾರಿ ದಂಡ

mysore
Published on

ಇನ್ನು ಮುಂದೆ ಚಾಮುಂಡಿಬೆಟ್ಟ ಮೀಸಲು ಅರಣ್ಯ ಪ್ರದೇಶಕ್ಕೆ ಅತಿಕ್ರಮವಾಗಿ ಪ್ರವೇಶಿಸಿದರೆ ಅಥವಾ ಅನುಮತಿ ಇಲ್ಲದ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡಿದರೆ ದುಬಾರಿ ದಂಡ ಕಟ್ಟಬೇಕಾಗುತ್ತದೆ!

ಪರಿಸರ ಸೂಕ್ಷ್ಮ ಪ್ರದೇಶವಾದ ಚಾಮುಂಡಿ ಬೆಟ್ಟದ ನೈಸರ್ಗಿಕ ಸಂಪತ್ತನ್ನು ವಿನಾಶಕಾರಿ ಚಟುವಟಿಕೆ ಮತ್ತು ವಸ್ತುಗಳಿಂದ ರಕ್ಷಿಸಲು, ಬೆಟ್ಟಕ್ಕೆ ಬರುವ ಪ್ರವಾಸಿಗರು/ಭಕ್ತರಿಗೆ ಅರಿವು ಮೂಡಿಸಲು ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಅರಣ್ಯ ಇಲಾಖೆ ದಂಡ ಪ್ರಯೋಗಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 1ರಿಂದ ದಂಡ ಪ್ರಯೋಗ ನಡೆಯಲಿದೆ.

ಪ್ರತಿದಿನ ಬೆಟ್ಟಕ್ಕೆ ಆಗಮಿಸುವ ಸಾವಿರಾರು ಭಕ್ತರು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯತ್ತಾರೆ. ಬೆಟ್ಟಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಭಕ್ತರ ಜತೆಗೆ ಪ್ರವಾಸಿಗರು ಆಗಮಿಸುತ್ತಾರೆ. ಜತೆಗೆ, ಮೀಸಲು ಅರಣ್ಯದೊಳಗೆ ಅತಿಕ್ರಮ ಪ್ರವೇಶ, ಮದ್ಯಪಾನ ಒಳಗೊಂಡಂತೆ ಹಾನಿಕಾರಕ ವಸ್ತುಗಳನ್ನು ಬಳಸುವುದು ಮತ್ತು ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಹೆಚ್ಚಾಗಿದೆ. ಇದರಿಂದ ಅರಣ್ಯ ಹಾನಿ ಜತೆಗೆ, ಅರಣ್ಯದ ಪುನರುತ್ಪಾದನೆಗೆ ಅಡ್ಡಿ ಉಂಟಾಗುತ್ತಿದೆ.
ಎಲ್ಲೆಂದರಲ್ಲಿ ಆಹಾರ ಪೊಟ್ಟಣ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಡುತ್ತಿರುವುದರಿಂದ ಬೇಸಿಗೆ ಕಾಲದಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗುತ್ತಿದೆ. ಇಂತಹ ವಸ್ತುಗಳು ಹೆಚ್ಚಾಗಿ ಅರಣ್ಯ ಸೇರುತ್ತಿರುವುದರಿಂದ ಬೆಂಕಿಯನ್ನು ಸುಲಭವಾಗಿ ನಂದಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದೆ.

ಅಲ್ಲದೆ, ಬೆಟ್ಟಕ್ಕೆ ಭೇಟಿ ನೀಡುವ ಭಕ್ತರು/ಪವಾಸಿಗರು ಪ್ರಾಣಿಗಳಿಗೆ ತಿಂಡಿ ತಿನಿಸುಗಳನ್ನು ನೀಡುತ್ತಿರುವುದು ಹೆಚ್ಚಾಗುತ್ತಿದ್ದು, ವನ್ಯಜೀವಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ. ಜತೆಗೆ, ಮಾನವ- ಪ್ರಾಣಿ ಸಂಘರ್ಷವನ್ನೂ ಹೆಚ್ಚಿಸುತ್ತಿದೆ. ಇಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಪ್ಲಾಸ್ಟಿಕ್ ಹಾಗೂ ಇತರ ಸುಲಭವಾಗಿ ಕೊಳೆಯದ ವಸ್ತುಗಳ ಬಳಕೆ ಹೆಚ್ಚಾಗಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಕರ್ನಾಟಕ ಅರಣ್ಯ ಕಾಯ್ದೆ ಅನ್ವಯ ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಿಣಿದಾರರ ಹುದ್ದೆಗೆ ಕಡಿಮೆಯಲ್ಲದ ಹುದ್ದೆಯ ಅಧಿಕಾರಿಗಳಿಗೆ ಚಾಮುಂಡಿಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಂದ ಅರಣ್ಯವನ್ನು ರಕ್ಷಿಸಲು ಮತ್ತು ಅಲ್ಲಿನ ಜೀವವೈವಿಧ್ಯವನ್ನು ಕಾಪಾಡಲು ಸೆ.1ರಿಂದ ದಂಡ ವಿಧಿಸಲು ಹಾಗೂ ವಸೂಲಿ ಮಾಡಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಯಾವುದಕ್ಕೆ ಎಷ್ಟು ಮೊತ್ತ?


ಚಾಮುಂಡಿ ಬೆಟ್ಟದ ಮೀಸಲು ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶ 500 ರೂ., ಅನುಮತಿ ಇಲ್ಲದ ಪ್ರದೇಶಗಳಲ್ಲಿ ವಾಹನ ನಿಲುಗಡೆ 1000 ರೂ., ಆಹಾರ, ತಿಂಡಿ ತಿನಿಸುಗಳ ಪ್ಯಾಕಿಂಗ್, ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಅರಣ್ಯ ಪ್ರದೇಶದಲ್ಲಿ ಬಿಸಾಡಿದರೆ 500 ರೂ., ಬೆಟ್ಟದ ಆವರಣದ ಅಂಗಡಿ ಮಾಲೀಕರು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಅರಣ್ಯ ಪ್ರದೇಶಕ್ಕೆ ಬಿಸಾಡಿದರೆ ಮೊದಲ ಬಾರಿಗೆ 2500 ರೂ., ಎರಡನೇ ಬಾರಿಗೆ 5000 ರೂ., ಎರಡಕ್ಕಿಂತ ಹೆಚ್ಚು ಬಾರಿ ಪುನರಾವರ್ತನೆಯಾದರೆ ಲೈಸೆನ್ಸ್ ರದ್ದುಗೊಳಿಸುವ ಜತೆಗೆ 10,000 ರೂ. ದಂಡ ವಿಧಿಸಲಾಗುವುದು.
ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಚಾಮುಂಡಿಬೆಟ್ಟದ ನಿವಾಸಿಗಳ ಹೊರತಾಗಿ ಹೊರಗಡೆಯಿಂದ ಅನಧಿಕೃತವಾಗಿ ಭೇಟಿ ನೀಡಿದರೆ 2500 ರೂ., ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಚಾಮುಂಡಿಬೆಟ್ಟದಲ್ಲಿ ಮದ್ಯಪಾನ ಒಳಗೊಂಡಂತೆ ಯಾವುದೇ ಹಾನಿಕಾರಕ ವಸ್ತುಗಳನ್ನು ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗುವುದು/ಉಪಯೋಗಿಸುವುದಕ್ಕೆ 5000 ರೂ., ವನ್ಯಪ್ರಾಣಿಗಳಿಗೆ ತೊಂದರೆ ನೀಡಿದರೆ, ಪ್ರಾಣಿಗಳಿಗೆ ಆಹಾರ ನೀಡಿದರೆ 1000 ರೂ., ಯಾವುದೇ ಅರಣ್ಯ ಅಥವಾ ವನ್ಯಜೀವಿಗಳಿಗೆ ಹಾನಿ ಮಾಡಿದರೆ 1000 ರೂ. ದಂಡ ತೆರಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net