

ಮಂಜುನಾಥ ತಿಮ್ಮಯ್ಯ ಮೈಸೂರು
ರಾಜಕೀಯದಲ್ಲಿ ನೇಪತ್ಯಕ್ಕೆ ಸರಿದಿದ್ದ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಅವರಿಗೆ ಮೇಘಾಲಯ ರಾಜ್ಯಪಾಲ ಸ್ಥಾನ ಅನಿರೀಕ್ಷಿತವಾಗಿ ಒಲಿದು ಬಂದಿದೆ. ಇದು ಬಿಜೆಪಿ ಮತ್ತು ಸಾರ್ವಜನಿಕ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿದೆ.
ಮೈಸೂರು ಲೋಕಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿದ್ದ ವಿಜಯಶಂಕರ್ ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಪ್ರತಿನಿಧಿಸುವ ಮೂಲಕ ರಾಜಕೀಯದಲ್ಲಿ ಸೋಲು-ಗೆಲವು ಕಂಡವರು. ಕುರುಬ ಸಮುದಾಯದವರಾದ ವಿಜಯಶಂಕರ್ ಅವರು ಕುಟುಂಬದ ಕಾರಣಕ್ಕೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಿಂದ ಮೈಸೂರು ಕಡೆ ವಲಸೆ ಬಂದು ಬದುಕು ರೂಪಿಸಿಕೊಂಡವರು. ರಾಜಕೀಯದಲ್ಲಿ ತಳಮಟ್ಟದಿಂದ ಹಂತ ಹಂತವಾಗಿ ಮೇಲೇರಿದವರು.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಆ ಪಕ್ಷದಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು. ಆ ಬಳಿಕ ಬಿಜೆಪಿಗೆ ಮತ್ತೆ ವಾಪಸ್ ಆಗಿ ತೆರೆಮರೆಗೆ ಸರಿದಿದ್ದರು. ಆದರೀಗ ಇವರನ್ನು ಗುರುತಿಸಿ ರಾಜ್ಯಪಾಲರನ್ನಾಗಿ ಮಾಡಲಾಗಿದೆ. ಇದು ವಿಜಯಶಂಕರ್ ಅವರಿಗೆ ಅದೃಷ್ಟವೋ ಅದೃಷ್ಟ. ಆದರೆ, ಈ ಕುರಿತು ವಿಜಯಶಂಕರ್ ಸೇರಿದಂತೆ ಆ ಪಕ್ಷದ ಯಾರಿಗೂ ಸಣ್ಣ ಸುಳಿವು ಸಹ ಇರಲಿಲ್ಲ. ಈ ರೀತಿಯ ಅಚ್ಚರಿ ಆಯ್ಕೆಯಿಂದ ವಿವಿಧ ರಾಜಕೀಯ ಮುಖಂಡರಿಗೂ ಸಹ ಅಚ್ಚರಿಯಾಗಿದೆ.
ಕಾಂಗ್ರೆಸ್‌ನಿಂದ ರಾಜಕೀಯ ಜೀವನ ಆರಂಭಿಸಿದ ವಿಜಯಶಂಕರ್, ಬಿಜೆಪಿಯಿಂದ ಒಂದು ಬಾರಿ ಶಾಸಕ, 2 ಬಾರಿ ಸಂಸದ ಹಾಗೂ ಒಮ್ಮೆ ವಿಧಾನಪರಿಷತ್ ಸದಸ್ಯರಾಗಿ ಮತ್ತು ಸಚಿವರಾಗಿ ಅಧಿಕಾರ ಕಂಡಿದ್ದಾರೆ. ವ್ಯಕ್ತಿಗತವಾಗಿ ಇವರು ಸರಳ, ಸಜ್ಜನಿಕೆ ಹಾಗೂ ಸೌಮ್ಯ ಸ್ವಭಾವದವರು.
2010ರಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಇವರನ್ನು ವಿಧಾನಪರಿಷತ್ ಸದಸ್ಯರಾಗಿ ಮಾಡಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಸಣ್ಣ ಕೈಗಾರಿಕೆ, ಅರಣ್ಯ ಖಾತೆ ನೀಡಿ ರಾಜಕೀಯವಾಗಿ ಮೇಲೆ ಬರಲು ಅವಕಾಶ ಕಲ್ಪಿಸಿಕೊಡಲಾಯಿತು. ಚಾಮರಾಜನಗರ ಹಾಗೂ ಬಳಿಕ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
1989ರಲ್ಲಿ ಹುಣಸೂರು ಕ್ಷೇತ್ರದಿಂದ ಗೆದ್ದಿದ್ದ ಚಂದ್ರಪ್ರಭಾ ಅರಸು ಅವರು 1991ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದರು. ಅವರ ರಾಜೀನಾಮೆಯಿಂದ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸಿ.ಎಚ್.ವಿಜಯಶಂಕರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಚಿಕ್ಕಮಾದು ಎದುರು ಪರಾಭವಗೊಂಡರು. ಆದರೆ, ಇದು ರಾಜಕೀಯವಾಗಿ ಗುರುತಿಸಿಕೊಂಡು ಮೇಲೇರಲು ಏಣಿ ಮಾಡಿಕೊಂಡರು. ಬಳಿಕ ಸಂಘಟನೆ ಮಾಡಿ ನಾಯಕರಾಗಿ ಹೊರಹೊಮ್ಮಿದ್ದರು. ಇದರ ಫಲವಾಗಿ 1994ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿ ಜಯ ಸಾಧಿಸುವ ಮೂಲಕ ರಾಜಕೀಯವಾಗಿ ಮುಂಚೂಣಿಗೆ ಬಂದರು.
ಮೈಸೂರು-ಕೊಡಗು ಕ್ಷೇತ್ರದಿಂದ 1998ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸಿದ ವಿಜಯಶಂಕರ್1.03 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿ ಮೊದಲ ಬಾರಿಗೆ ಸಂಸದರಾದರು. ಆ ಮೂಲಕ ಈ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಮಲ ಅರಳಿಸಲು ಕಾರಣರಾದರು.
ಮರುವರ್ಷ ನಡೆದ 1999ರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ರುಚಿಕಂಡರು.
ಈ ಸೋಲನ್ನು ಮೆಟ್ಟಿಲು ಮಾಡಿಕೊಂಡ ಇವರು 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ದಾಖಲಿಸಿದ್ದರು. ಆದರೆ, ಈ ಸ್ಥಿರತೆ ಕಾಯ್ದುಕೊಳ್ಳಲು ವಿಫಲರಾದ ಇವರು, 2009ರಲ್ಲಿ ಪರಾಜಯ ಕಂಡರು.
2014ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರುದ್ಧ ಸ್ಪರ್ಧೆ ಮಾಡಲು ವಿಜಯಶಂಕರ್ ಅವರನ್ನು ಕಳುಹಿಸಿಕೊಡಲಾಯಿತು. ಒಲ್ಲದ ಮನಸ್ಸಿನಿಂದ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಪರಾಜಯಗೊಂಡಿದ್ದರು.
ಬಳಿಕವೇ ಇವರ ರಾಜಕೀಯ ಜೀವನ ಮಸುಕಾಯಿತು. ಇದರಿಂದ 2018ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ನ ಕೈ ಹಿಡಿದರು. 2019ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲನುಭವಿಸಿದರು. ಬಳಿಕ ಬಿಜೆಪಿಗೆ ಮರು ಸೇರ್ಪಡೆಯಾದರು. ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡರು. ರಾಜಕೀಯವಾಗಿ ಮೂಲೆಗುಂಪಾಗಿದ್ದ ಇವರಿಗೆ ಇದೀಗ ರಾಜ್ಯಪಾಲರ ಸ್ಥಾನ ಹುಡುಕಿಕೊಂಡು ಬಂದಿರುವುದು ಆ ಪಕ್ಷದ ಕಾರ್ಯಕರ್ತರಲ್ಲಿ ಆಶ್ಚರ್ಯ ಉಂಟು ಮಾಡಿದೆ.
ವಿಜಯಶಂಕರ್ ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಾಕನೂರು ಗ್ರಾಮದವರು. 1956ರ ಅ.21ರಂದು ಜನಿಸಿದ ಇವರು ಬ್ಯಾಡಗಿಯಲ್ಲಿ ಶಿಕ್ಷಣ ಪಡೆದರು. ಬಿ.ಎಸ್ಸಿ. ಪದವೀಧರರರಾದ ಇವರ ರಾಜಕೀಯ ಬದುಕು ಶುರುವಾಗಿದ್ದು ಮೈಸೂರು ಜಿಲ್ಲೆಗೆ ವಲಸೆ ಬಂದಾಗಲೇ.
ಹುಣಸೂರಿನಲ್ಲಿ ಎಸ್‌ಐ ಆಗಿದ್ದ ತಮ್ಮ ಭಾವ ನಿಧನರಾದಾಗ ಅಕ್ಕನ ಕುಟುಂಬಕ್ಕೆ ನೆರವಾಗಲು ಬಂದು ಇಲ್ಲೇ ನೆಲೆ ಕಂಡುಕೊಂಡರು. ಹುಣಸೂರಿನಲ್ಲಿ ಕುಟುಂಬದವರು ನಡೆಸುತ್ತಿದ್ದ ಸಿಮೆಂಟ್ ವ್ಯಾಪಾರವನ್ನು ಮುಂದುವರಿಸಿಕೊಂಡು ಹೋದರು. ಅದರಿಂದ ದೊರೆತ ಜನರ ಸಂಪರ್ಕದಿಂದ ರಾಜಕೀಯಕ್ಕೆ ಬಂದರು.