ಹೋಬಳಿ ಮಟ್ಟದ ಶಾಲಾ ಕ್ರೀಡಾಕೂಟಕ್ಕೆ ಚಾಲನೆ

Oplus_0
Oplus_0
Published on

ಯಳಂದೂರು: ತಾಲೂಕಿನ ಸಂತೆಮರಹಳ್ಳಿ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಗುಂಬಳ್ಳಿ ಹೋಬಳಿ ಮಟ್ಟದ ಶಾಲಾ ಕ್ರೀಡಾಕೂಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಮಂಗಳವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಬಿಳಿಗಿರಿರಂಗನಬೆಟ್ಟದ ಯಕನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಆಯೋಜನೆ ಮಾಡಿರುವ ಕ್ರೀಡಾಕೂಟವು ಗ್ರಾಮೀಣ ಮಕ್ಕಳ ಕ್ರೀಡಾ ಪ್ರತಿಭೆ ಬೆಳಗಲು ಸಹಕಾರಿಯಾಗಿದೆ ಎಂದರು. ಕ್ರೀಡೆಯು ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಪೂರಕವಾಗಿದೆ. ನಮ್ಮ ದೇಶ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಬೇಕು ಎಂದರೆ ನಾವು ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳನ್ನು ಉತ್ತೇಜಿಸಬೇಕು. ಆಗ ಮಾತ್ರ ವಿಶ್ವ ಮಟ್ಟದಲ್ಲಿ ಅನೇಕ ಪದಕಗಳನ್ನು ಗೆಲ್ಲಲು ಸಾಧ್ಯವಾಗಲಿದೆ ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದೃಢ ದೇಹವನ್ನು ಹೊಂದಿರುತ್ತಾರೆ. ಇವರಿಗೆ ಕ್ರೀಡೆಯಲ್ಲೂ ಆಸಕ್ತಿ ಇರುತ್ತದೆ. ಆದರೆ ಸೂಕ್ತ ಮಾರ್ಗದರ್ಶನ, ಸತತ ಅಭ್ಯಾಸಕ್ಕೆ ಹಲವಾರು ತೊಂದರೆಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ಇಂತಹ ಕ್ರೀಡಾಕೂಟಗಳು ಅತ್ಯುತ್ತಮ ವೇದಿಕೆಯಾಗಬಲ್ಲವು. ಇದನ್ನು ಮಕ್ಕಳು ಸೂಕ್ತವಾಗಿ ಬಳಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ಸಾವಿತ್ರಿ ಬಾಯಿ ಫುಲೆ ಸಂಘದ ಅಧ್ಯಕ್ಷೆ ಮಹದೇವಮ್ಮ, ಯರಕನಗದ್ದೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ಮುಖ್ಯ ಶಿಕ್ಷಕರಾದ ಜಯಶಂಕರ್, ಎ.ಜಿ. ಮರಿಸ್ವಾಮಿ, ಟಿಪಿಒ ಶಾಂತರಾಜು, ಇಸಿಒ ಕುಮಾರ್, ಸಿಆರ್‌ಪಿ ರೇಚಣ್ಣ ಸೇರಿದಂತೆ ಅನೇಕರು ಇದ್ದರು.

ವಿವಿಧ ಆಟೋಟಗಳಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net