ರಂಗಭೂಮಿಗೆ ಸಿಜಿಕೆ ಕೊಡುಗೆ ಅಪಾರ, ನೆಲಮಂಗಲ ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಜಿ.ಗಂಗರಾಜು ಅಭಿಮತ

27 Nela Ph 02 CGK Ranga Purashkara
Published on

ನೆಲಮಂಗಲ: ಸಿಜಿಕೆ (ಚಳ್ಳಕೆರೆ ಗೋವಿಂದ ನಾಯಕನ ಮಗ ಕೃಷ್ಣಸ್ವಾಮಿ) ಅವರು ಭೌತಿಕವಾಗಿ ಇಲ್ಲದಿದ್ದರೂ ರಂಗಭೂಮಿಗೆ ನೀಡಿದ ಅವರ ಸೇವೆ, ಆದರ್ಶ ಇಂದಿಗೂ ಜೀವಂತ ಎಂದು ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಜಿ.ಗಂಗರಾಜು ತಿಳಿಸಿದರು.

ನಗರದ ರಂಗ ಶಿಕ್ಷಣ ಕೇಂದ್ರದಲ್ಲಿ ಕರ್ನಾಟಕ ಬೀದಿ ರಂಗಭೂಮಿ ಅಕಾಡೆಮಿ, ರಂಗಶಿಕ್ಷಣ ಕೇಂದ್ರದಿಂದ ಶನಿವಾರ ಆಯೋಜಿಸಿದ್ದ ಸಿ.ಜಿ.ಕೆ. ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ರಿಯಾಶೀಲ ಹಾಗೂ ಸಕ್ರಿಯ ಕಲಾವಿದರಾಗಿದ್ದಲ್ಲಿ ರಂಗಭೂಮಿ ಹಾಗೂ ಸಮಾಜದ ನಾನಾ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಬಹುದು ಎಂಬುದಕ್ಕೆ ಸಿಜಿಕೆ ನೈಜ ಉದಾಹರಣೆ ಎಂದರು.

ಅವರ ಪರಿಶ್ರಮದಿಂದಾಗಿ ಸಾವಿರಾರು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಕಲೆ ಮತ್ತು ಪರಿಸ್ಥಿತಿಗಳು ಸುಧಾರಣೆಯಾಗಬೇಕಾದಲ್ಲಿ ರಂಗಭೂಮಿಯಲ್ಲಿ ಸಂಶೋಧನೆಗಳಾಗಬೇಕು. ಸಿಜಿಕೆಯಂತಹ ನೂರಾರು ನುರಿತಕಲಾವಿದರು ಉದಯವಾಗಬೇಕು ಎಂದರು.

ಬೀದಿನಾಟಕ ಹುಟ್ಟಿಗೆ ಕಾರಣವಾದ ಸಿ.ಜಿ.ಕೃಷ್ಣಸ್ವಾಮಿ ಅವರ ಹುಟ್ಟುಹಬ್ಬವನ್ನು ಬೀದಿರಂಗ ದಿನವಾಗಿ ರಾಜ್ಯಾದ್ಯಂತ ಆಚರಿಸುವ ಜತಗೆ ರಂಗಭೂಮಿಯಲ್ಲಿ ಸಾಧನೆ ಮಾಡಿರುವ ಕಲಾವಿದರಿಗೆ ಗೌರವಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪುರಸ್ಕಾರ ನೀಡಲಾಗುತ್ತಿದೆ. ಅದರಂತೆ ಈ ಬಾರಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿಜಿಕೆ ಪುರಸ್ಕಾರವನ್ನು ರಂಗಭೂಮಿಕಲಾವಿದ ಬಿ.ಪ್ರಕಾಶ್‌ಮೂರ್ತಿ ಅವರಿಗೆ ನೀಡುತ್ತಿರುವುದಾಗಿ ರಂಗಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜು ತಿಳಿಸಿದರು.

ಹಲವು ವರ್ಷಗಳಿಂದಲೂ ವೃತ್ತಿಯಲ್ಲಿ ಛಾಯಾಗ್ರಹಕರಾಗಿದ್ದು, ಪ್ರವೃತ್ತಿಯಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದನಾಗಿದ್ದ ನನಗೆ ಸಿಜಿಕೆ ಅವರ ಹೆಸರಿನಲ್ಲಿ ಜಿಲ್ಲಾಮಟ್ಟದ ರಂಗಪುರಸ್ಕಾರ ನೀಡಿರುವುದು ಸಂತಸದ ಜತೆಗೆ ಮತ್ತಷ್ಟು ಕಲಾಸೇವೆ ಮಾಡಲು ಸ್ಫೂರ್ತಿ ದೊರೆತಂತಾಗಿದೆ ಎಂದು ಪ್ರಶಸ್ತಿ ಪುರಸ್ಕೃತ ಬಿ.ಪ್ರಕಾಶ್‌ಮೂರ್ತಿ ತಿಳಿಸಿದರು.

ಹೊಯ್ಸಳ ಪಿಯು ಕಾಲೇಜು ಪ್ರಾಂಶುಪಾಲ ಬೋಗಣ್ಣ, ರಂಗನಿರ್ದೇಶಕ ವಿ.ದೇವರಾಜು, ಗ್ರಾಪಂ ಸದಸ್ಯ ಯಲ್ಲಪ್ಪ, ಉಪನ್ಯಾಸಕ ಮಾರುತಿ, ಕಲಾವಿದ ಕಾಚನಹಳ್ಳಿಸಿದ್ದರಾಜು, ಜ್ಯೋತಿರ್ಲಿಂಗಪ್ಪ, ವೆಂಕಟೇಶ್, ದೊಡ್ಡೇರಿಬೈಲಪ್ಪ, ಬೂದಿಹಾಳ್ ಕೃಷ್ಣಪ್ಪ, ಚಿಕ್ಕಮಾರನಹಳ್ಳಿದಿನೇಶ್, ಸಿ.ಎಚ್.ಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net