

ಮಂಡ್ಯ: ಸಿಜಿಕೆ ಅವರು ಪೌರಾಣಿಕ ನಾಟಕಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಇದರ ಭಾಗವಾಗಿಯೇ ಹವ್ಯಾಸ ರಂಗಭೂಮಿಯಲ್ಲಿ ಬೀದಿ ನಾಟಕಗಳಿಗೆ ಒತ್ತು ನೀಡಿ ರಾಜ್ಯಾದ್ಯಂತ ಗಮನ ಸೆಳೆದರು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಹೇಳಿದರು.
ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಬೀದಿನಾಟಕ ಅಕಾಡೆಮಿ, ಕರ್ನಾಟಕ ಸಂಘ, ಅನಿಕೇತನ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಸಿಜಿಕೆ ಬೀದಿರಂಗ ದಿನ, ಸಿಜಿಕೆ ರಂಗ ಪುರಸ್ಕಾರ ಹಾಗೂ ಹೋರಾಟದ ಹಾಡುಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಣೇಹಳ್ಳಿಯಲ್ಲಿ ಸಿಜಿಕೆ ಅವರ ರಂಗಪ್ರೇಮ ಎಂತಹದ್ದು ಎಂಬುದು ತಿಳಿಯುತ್ತದೆ. ಮಂಡ್ಯದಲ್ಲಿ ಒಂದು ನಾಟಕ ಮಾಡಿ ಸಿಜಿಕೆ ಅವರೇ ಎಂದು ಕೇಳಿಕೊಂಡಾಗ ತಬರನ ಕಥೆಯನ್ನು ಕೇವಲ ಒಂದೇ ವಾರದಲ್ಲಿ ಪ್ರಸ್ತುತ ಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶ್ರೇಣೀಕೃತ ಸಮಾಜದಲ್ಲಿರುವ ನಾವು ಹಿಂದುಳಿದ ವರ್ಗದ ಕಲಾವಿದರನ್ನು ಬೆಳೆಸಿದ್ದ ಸಿಜಿಕೆ ಅವರ ಸರಳತೆ ಇಂದಿಗೂ ಪ್ರಸ್ತುತ. ಸಿಜಿಕೆ ಅವರ ಕಾರ್ಯಕ್ರಮಗಳನ್ನು ತಲೆಮೇಲೆ ಹೊತ್ತು ಮಾಡುತ್ತಿರುವ ಸಂಸ ಸುರೇಶ ಅವರ ಗೌರವ ಮೆಚ್ಚಬೇಕು ಎಂದು ತಿಳಿಸಿದರು.
ನಾಟಕಗಳು, ನಿರ್ದೇಶಕರು ಬೆಳವಣಿಗೆ ಆಗುತ್ತಿರುವ ಹೊತ್ತಿನಲ್ಲಿ ಬಹುಮುಖ್ಯವಾಗಿ ಪ್ರೇಕ್ಷಕರ ಸಂಖ್ಯೆ ಮಾತ್ರ ಹೆಚ್ಚಳವಾಗುತ್ತಿಲ್ಲ ಏಕೆ ಎಂಬುದನ್ನು ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಬೇಕಿದೆ. ನಾಟಕಗಳಲ್ಲಿನ ನಿರ್ದೇಶಕರ ಸಂಭಾವನೆ ಹಾಗೂ ನಾಟಕ ನಿರ್ವಹಣೆಯ ವೆಚ್ಚ ಹೆಚ್ಚಿದೆ. ಆದರೆ, ನಾಟಕ ವೀಕ್ಷಣೆ ಮಾಡಲು ಟಿಕೆಟ್ ದರ ಮಾತ್ರ 10 ರೂನಿಂದ 50 ರೂಪಾಯಿಗಳು ಇದೆ. ಇವೆಲ್ಲವೂ ಪ್ರಸ್ತುತ ಪರಿಸ್ಥಿತಿ ಆಗಿದೆ ಎಂದರು.
ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಮಾತನಾಡಿ, ಸಿ.ಜಿ.ಕೃಷ್ಣಸ್ವಾಮಿ ಅವರು ನಿಜವಾದ ಮುತ್ತು. ಅವರು ಹುಟ್ಟಿದ್ದ ಮಂಡ್ಯದಲ್ಲಿ ಬೆಳೆದದ್ದು ಬೆಂಗಳೂರಿನಲ್ಲಿ ಹೆಸರು ಮಾಡಿದ್ದು ಕರ್ನಾಟಕದಾದ್ಯಂತ. ಅಂಗವೈಕಲ್ಯಕ್ಕೆ ಒಳಗಾದರೂ ಅದನ್ನು ಲೆಕ್ಕಿಸದೇ ಸಿಜಿಕೆ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಹೋರಾಟ ಕ್ಷೇತ್ರ ಆಯ್ಕೆ ಮಾಡಿಕೊಂಡರು. ನಿರ್ದೇಶಕರಾಗಿ 29 ಹಾಗೂ 11 ನಾಟಕಗಳಿಗೆ ಬೆಳಕಿನ ವಿನ್ಯಾಸಗಾರರಾಗಿ ಕೆಲಸ ಮಾಡಿದ್ದಾರೆ ಎಂದರು.
ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಅದನ್ನು ಬೀದಿ ನಾಟಕ ಪ್ರದರ್ಶನಗಳ ಮೂಲಕವೇ ಅವರ ವಿರುದ್ಧ ದೊಡ್ಡ ಹೋರಾಟವನ್ನೇ ಸಿಜಿಕೆ ಮಾಡಿದ್ದರು. ಈಗ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆಯುತ್ತಿರುವ ರೈತರ ಭೂಸ್ವಾಧೀನ ವಿರೋಧದ ಹೋರಾಟಕ್ಕೂ ಅವರು ಬದುಕಿದ್ದರೆ ಮುಂಚೂಣಿಯಲ್ಲಿ ಇದನ್ನೂ ಬೀದಿ ನಾಟಕ ಪ್ರದರ್ಶನದ ಮೂಲಕವೇ ಖಂಡಿಸುತ್ತಿದ್ದರು ಎಂದು ಶ್ಲಾಘಿಸಿದರು.
ರಂಗ ಸಂಘಟಕ ಕೆ.ಆರ್.ಗೋಪಾಲಕೃಷ್ಣ ಮಾತನಾಡಿ, ಸಾಮಾಜಿಕ ಬದುಕಿನೊಂದಿಗೆ ರಂಗ ಗೀತೆಯ ಮೂಲಕ ಬೀದಿ ನಾಟಕ ಪ್ರದರ್ಶನ ಮಾಡಿ ಜನಮನ್ನಣೆಗಳಿಸಿದ ಸಿಜಿಕೆ ಅವರು ಎಲ್ಲರಿಗೂ ಪ್ರೇರಣೆಯಾಗಿದ್ದರು. ಸಾಮಾಜಿಕ ಸಮಸ್ಯೆಗಳನ್ನು ಬೀದಿ ನಾಟಕಗಳ ಮೂಲಕವೇ ಪ್ರದರ್ಶನಗೊಳಿಸಿ ಎಚ್ಚರಗೊಳಿಸುತ್ತಿದ್ದ ಸಿಜಿಕೆ ರಂಗಪ್ರಜ್ಞೆ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಶ್ಲಾಘಿಸಿದರು.
ಧನಗೂರು ಷಡಕ್ಷರ ಪೀಠ ಡಾ.ಕೂಡ್ಲೂರು ವೆಂಕಟಪ್ಪ, ಚಿತ್ರ ಕಲಾವಿದ ಕೃಷ್ಣರಾಯಚೂರ್, ಕರ್ನಾಟಕ ಬೀದಿನಾಟಕ ಅಕಾಡೆಮಿ ರಾಜ್ಯ ಸಂಘಟಕ ಸಂಸ ಸುರೇಶ್ ಭಾಗವಹಿಸಿದ್ದರು.
ಇದೇ ವೇಳೆ ರಂಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಬಾಲಕೃಷ್ಣ(ಇವರ ಪರವಾಗಿ ಸಹೋದರ ಯೋಗಾನಂದ), ಹುರುಗಲವಾಡಿ ರಾಮಯ್ಯ, ವಳಗೆರೆಹಳ್ಳಿ ಲೋಕೇಶ್, ಅಶ್ವಥ ನಾರಾಯಣ ಪಾಂಡವಪುರ, ಮಂಜುಳಾ ಆಲದಹಳ್ಳಿ ಅವರಿಗೆ ಅವರಿಗೆ ಸಿಜಿಕೆ ರಂಗ ಪುರಸ್ಕಾರ ನೀಡಲಾಯಿತು.