ಸಿಎಫ್‌ಟಿಆರ್‌ಐನಲ್ಲಿ ‘ಮುಕ್ತ ದಿನ’ಕ್ಕೆ ಚಾಲನೆ

CFTRI Open Day
Published on

ಮೈಸೂರು: ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ‘ಮುಕ್ತ ದಿನ’ಕ್ಕೆ ಗುರುವಾರ ಚಾಲನೆ ದೊರೆಯಿತು. ಗುರುವಾರ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಿಎಫ್‌ಟಿಆರ್‌ಐಗೆ ಆಗಮಿಸಿ ಆಹಾರ ತಂತ್ರಜ್ಞಾನದ ಕುರಿತು ಮಾಹಿತಿ ಪಡೆದರು.

ಸಿಎಫ್‌ಟಿಆರ್‌ಐ ಅಭಿವೃದ್ಧಿ ಪಡಿಸಿದ ವಿವಿಧ ಆಹಾರ ಉತ್ಪನ್ನಗಳು ಹಾಗೂ ತಂತ್ರಜ್ಞಾನವನ್ನು ಎಲ್ಲ ಸಮಯದಲ್ಲೂ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ದೊರೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ‘ಮುಕ್ತ ದಿನ’ ಹಮ್ಮಿಕೊಂಡು ಸಿಎಫ್‌ಟಿಆರ್‌ಐನ ಆಹಾರ ಉತ್ಪನ್ನಗಳು ಹಾಗೂ ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತದೆ.

ದೋಸೆ ಸವಿದ ವಿದ್ಯಾರ್ಥಿಗಳು

ಮುಕ್ತದಿನದಲ್ಲಿ ಚಪಾತಿ, ದೋಸೆ, ಜೋಳದ ರೊಟ್ಟಿ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸುವ ಯಂತ್ರಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯಂತ್ರಗಳ ಕುರಿತು ಮಾಹಿತಿ ಪಡೆದರು. ಗಂಟೆಗೆ 400 ದೋಸೆ ತಯಾರಿಸುವ ದೋಸೆ ಯಂತ್ರ ಕಾರ್ಯನಿರ್ವಹಿಸುವ ರೀತಿಯನ್ನು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು. ಅಲ್ಲದೆ, ದೋಸೆ ಯಂತ್ರದಲ್ಲಿ ತಯಾರಿಸಿದ ದೋಸೆ ರುಚಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಲಿನ 24 ಬಗೆಯ ಪರೀಕ್ಷೆ

ಹಾಲಿಗೆ ನೀರು ಬೆರಸಲಾಗಿದೆಯೇ ಅಥವಾ ಇಲ್ಲವೇ ಎಂದು ಹಾಲು ಖರೀದಿ ಕೇಂದ್ರದಲ್ಲಿ ಯಂತ್ರದ ಮೂಲಕ ಪತ್ತೆ ಹಚ್ಚಲಾಗುತ್ತದೆ. ಆದರೆ, ಹಾಲಿಗೆ ನೀರು ಬೆರೆಸಿರುವುದು ಗೊತ್ತಾಗದಂತೆ ಮಾಡಲು ಸಕ್ಕರೆ, ಯೂರಿಯಾ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಸೇರಿಸಲಾ ಗುತ್ತದೆ. ಇವುಗಳನ್ನು ಪತ್ತೆ ಹಚ್ಚಲು 24 ಬಗೆಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಪರೀಕ್ಷೆಗಳನ್ನು ಸಿಎಫ್‌ಟಿಆರ್‌ಐ ವಿಜ್ಞಾನಿಗಳು ಮಾಡಿ ತೋರಿಸಿದರು. ಅದೇ ರೀತಿ ಜೇನಿನ ಕಲಬೆರಕೆಯನ್ನು ಯಾವ ರೀತಿ ಪತ್ತೆ ಹಚ್ಚಬಹುದು ಎಂಬುದನ್ನು ತಿಳಿಸಿಕೊಡಲಾಯಿತು.

ಗಮನ ಸೆಳೆದ ಸಿರಿಧಾನ್ಯ ಗಿರಣಿ ಯಂತ್ರ

ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಜನರು ಇತ್ತೀಚೆಗೆ ಸಿರಿಧಾನ್ಯವನ್ನು ಬಳಕೆ ಮಾಡಲು ಪ್ರಾರಂಭಿಸಿದ್ದಾರೆ. ಆದರೆ, ಸಿರಿಧಾನ್ಯದ ಹೊಟ್ಟನ್ನು ತೆಗೆಯುವ ಗಿರಣಿಗಳು ಕಾಣಸಿಗುವುದು ಅಪರೂಪ. ಈ ಹಿನ್ನೆಲೆಯಲ್ಲಿ ಮನೆ ಬಳಕೆಗೋಸ್ಕರ ಸಿಎಫ್‌ಟಿಆರ್‌ಐ ಸಣ್ಣದಾದ ಸಿರಿಧಾನ್ಯ ಗಿರಣಿ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದು, ಇದು ಮುಕ್ತ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಈ ಗಿರಣಿ ಕಾರ್ಯನಿರ್ವ ಹಿಸಲು ವಿದ್ಯುತ್ ಅವಶ್ಯಕತೆ ಇಲ್ಲ, ಯಂತ್ರಕ್ಕೆ ಅಳವಡಿಸಿದ ಸೈಕಲ್ ತುಳಿದರೆ ಹೊಟ್ಟು ಹಾಗೂ ಸಿರಿಧಾನ್ಯ ಬೇರ್ಪಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net